ಹೆಂಡತಿಗೆ ಅಡುಗೆ ಮಾಡಲು ಬರಲ್ಲ.. ಡಿವೋರ್ಸ್‌ ಬೇಕು ಎಂದ ಗಂಡನಿಗೆ ಹೈಕೋರ್ಟ್ ಹೇಳಿದ್ದೇನು.!?

ಕೇರಳ : ಗಂಡ, ಹೆಂಡತಿ ಜಗಳಕ್ಕೆ ನೂರಾರು ಕಾರಣಗಳಿವೆ. ಕೆಲವೊಮ್ಮೆ ಸಣ್ಣ, ಸಣ್ಣ ಕಾರಣಗಳು ದೊಡ್ಡ ಆಪತ್ತಿಗೆ ದಾರಿ ಮಾಡಿಕೊಡುತ್ತವೆ. ಮನಃಸ್ತಾಪ ಹೆಚ್ಚಾದ್ರೆ ಗಂಡ-ಹೆಂಡತಿ ಸಂಸಾರ ವಿಚ್ಛೇದನದವರೆಗೂ ಹೋಗಿ ನಿಲುತ್ತೆ. ಕೇರಳದಲ್ಲೂ ಇಂತಹದೇ ಒಂದು ಘಟನೆ ನಡೆದಿದೆ.

ಹೆಂಡತಿಗೆ ಅಡುಗೆ ಮಾಡಲು ಬರಲ್ಲ ಅಂತ ಗಂಡನೊಬ್ಬ ಡಿವೋರ್ಸ್‌ಗಾಗಿ ಕೋರ್ಟ್‌ ಮೆಟ್ಟಿಲೇರಿದ್ದಾನೆ. ಇವನ ದೂರಿಗೆ ಗರಂ ಆದ ಕೇರಳ ಹೈಕೋರ್ಟ್ ಸರಿಯಾಗೇ ಬುದ್ಧಿ ಹೇಳಿ ಕಳುಹಿಸಿದೆ.

ಹೆಂಡತಿ ಅಡುಗೆ ಮಾಡಲು ಬರಲ್ಲ ಅನ್ನೋ ಕಾರಣ ಡಿವೋರ್ಸ್‌ ಕೇಳಿದ ಪ್ರಕರಣದ ವಿಚಾರಣೆ ಕೇರಳ ಹೈಕೋರ್ಟ್‌ನಲ್ಲಿ ನಡೆದಿದೆ.

ವಿಚ್ಛೇದನ ಕೋರಿದ ಅರ್ಜಿಯಲ್ಲಿ ಪತಿರಾಯ ನನ್ನ ಪತ್ನಿಗೆ ಸರಿಯಾಗಿ ಅಡುಗೆ ಮಾಡಲು ಬರಲ್ಲ. ಸಂಬಂಧಿಕರ ಮುಂದೆ ನನ್ನನ್ನು ಅವಮಾನಿಸಿದ್ದಾಳೆ ಎಂದು ದೂರಿದ್ದಾನೆ. ಗಂಡನ ಈ ವಾದ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ ಅಡುಗೆ ಮಾಡಲು ಬರಲ್ಲ ಅನ್ನೋದು ಕ್ರೌರ್ಯವಲ್ಲ. ಹೀಗಾಗಿ ವಿಚ್ಛೇದನ ನೀಡಲು ಸಾಧ್ಯವೇ ಇಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿದೆ.

ಹೆಂಡತಿಗೆ ಅಡುಗೆ ಮಾಡಲು ಬರಲ್ಲ ಎಂದಿರುವ ಗಂಡನ ದೂರು ಇಷ್ಟಕ್ಕೆ ಮುಗಿದಿಲ್ಲ. ಆಕೆ ನನಗೆ ಗೌರವ ನೀಡುತ್ತಿರಲಿಲ್ಲ. ನನ್ನ ಮೇಲೆ ಉಗುಳಿದ್ದಾಳೆ. ನನ್ನನ್ನು ಕೆಲಸದಿಂದ ತೆಗೆದು ಹಾಕಲು ನನ್ನ ಆಫೀಸ್‌ಗೆ ಹೇಳಿದ್ದಾಳೆ ಎಂದೆಲ್ಲಾ ಆರೋಪಿಸಿದ್ದ. ಗಂಡನ ಇಷ್ಟೆಲ್ಲಾ ಆರೋಪಗಳ ವಿಚಾರಣೆ ನಡೆಸಿದ ಹೈಕೋರ್ಟ್‌ನ ವಿಭಾಗೀಯ ಪೀಠ, ಈ ಎಲ್ಲಾ ಕಾರಣಗಳು ಅಧಿಕೃತ ಮದುವೆಯನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ. ಅಡುಗೆ ಮಾಡಲು ಬಾರದೇ ಇರೋ ವಿಚಾರ ಕ್ರೌರ್ಯಕ್ಕೆ ಸಂಬಂಧಿಸಿದ್ದು ಅಲ್ಲ. ಹೀಗಾಗಿ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಗಂಡನ ಅರ್ಜಿಯನ್ನು ತಿರಸ್ಕರಿಸಿದೆ.

Scroll to Top