ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಪರಶುರಾಮ ಥೀಂ ಪಾರ್ಕ್ ಪ್ರತಿದಿನ ಸುದ್ದಿಯಲ್ಲಿದೆ.
33 ಅಡಿ ಎತ್ತರದ ಪ್ರತಿಮೆ ಕಂಚಿನದ್ದಲ್ಲ ಫೈಬರ್ ಎಂಬುದು ಕಾಂಗ್ರೆಸ್ ಆರೋಪ ಮಾಡಿದೆ. ರಟ್ಟು ಫೈಬರ್ ನಿಂದ ಮೂರ್ತಿ ನಿರ್ಮಾಣ ಮಾಡಿದ್ದಾರೆ ಎಂದು ಕಾಂಗ್ರೆಸ್ ನಿರಂತರವಾಗಿ ಆರೋಪ ಪ್ರತಿಭಟನೆ ಮಾಡುತ್ತಿದೆ. ಈ ಬಗ್ಗೆ ಒಂದು ವೀಡಿಯೋ ಕೂಡ ಬಿಡುಗಡೆ ಮಾಡಿತ್ತು.
ಕಾಂಗ್ರೆಸ್ ಆರೋಪದ ಬೆನ್ನಲ್ಲೇ ಇದೀಗ ಬಿಜೆಪಿ ಕಾರ್ಯಕರ್ತರು, ಕ್ಷೇತ್ರ ಅಧ್ಯಕ್ಷರು ವೀಡಿಯೋ ಬಿಟ್ಟಿದ್ದಾರೆ. ಇದು ಕಂಚಿನ ಪ್ರತಿಮೆ ಎಂದು ಸಾಬೀತು ಮಾಡಿದ್ದಾರೆ. 15 ರಿಂದ 20 ಬಿಜೆಪಿ ಕಾರ್ಯಕರ್ತರು ತೆರವು ಮಾಡದೆ ಅರ್ಧ ಉಳಿಸಿರುವ ಮೂರ್ತಿಯನ್ನು ಪರೀಕ್ಷಿಸಿ, ಸುತ್ತಿಗೆಯಲ್ಲಿ ಬಡಿದು ಪರೀಕ್ಷಿಸಿ ಕಂಚು ಎಂದು ಸಾಬೀತು ಮಾಡಿದ್ದಾರೆ. ಕಾಂಗ್ರೆಸ್ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಆರೋಪ:
ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಾಯಕರು ಮಾಜಿ ಸಚಿವ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಬೆನ್ನುಬಿದ್ದಿದ್ದಾರೆ. ಕಂಚಿನ ಪ್ರತಿಮೆಗೆ ಬದಲಾಗಿ, ಭಾಗಶಃ ಫೈಬರ್ ಅಳವಡಿಸುವ ಮೂಲಕ ಸುಳ್ಳು ಹೇಳಿ ಜನರನ್ನ ವಂಚಿಸಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಾ ಬಂದಿತ್ತು. ಪರಶುರಾಮ ಪ್ರತಿಮೆಯ ಭಾಗಶಃ ತೆರವುಗೊಳಿಸಲಾಗಿದೆ.
ಗುರುವಾರ ವಿಧಾನಪರಿಷತ್ ಸದಸ್ಯ , ಕಾಂಗ್ರೆಸ್ ಮುಖಂಡ ಮಂಜುನಾಥ ಭಂಡಾರಿ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಪಕ್ಷದ ಪದಾಧಿಕಾರಿಗಳು ಕೂಡ ಹಾಜರಿದ್ದರು. ಥೀಂಪಾರ್ಕ್ ಸುತ್ತಮುತ್ತ ಅನೇಕ ಫೈಬರ್ ತುಣುಕುಗಳು ಸಿಕ್ಕಿದೆ. ಇದು ಫೈಬರ್ ಪ್ರತಿಮೇ, ಕೋಟ್ಯಂತರ ಅವ್ಯವಹಾರ ಆಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮುಂದುವರಿಸಿದ್ದಾರೆ.