ಕೆಲವೊಮ್ಮೆ ಅತಿಯಾದ ಬುದ್ಧಿವಂತಿಕೆ, ಜಾಣತನ ಮುಳುವಾಗುತ್ತದೆ ಅನ್ನೋದು ಇಲ್ಲಿ ಮತ್ತೆ ಸಾಬೀತಾಗಿದೆ. ಮಧ್ಯಪ್ರದೇಶ ರೇವಾದಲ್ಲಿ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳರಿಂದ ಮನೆಯಲ್ಲಿದ್ದ ಚಿನ್ನಾಭರಣ ರಕ್ಷಿಸಲು ಕಸದ ಬುಟ್ಟಿಯಲ್ಲಿ ಬಚ್ಚಿಡಲಾಗಿತ್ತು. ಇದನ್ನು ಅರಿಯದ ಮನೆಯ ಸಂಬಂಧಿಯೊಬ್ಬ ಕಸದ ವಾಹನ ಬಂದಾಗ ಡಸ್ಟ್ಬಿನ್ನಲ್ಲಿಟ್ಟ ಚಿನ್ನಾಭರಣ ಬ್ಯಾಗ್ ಡಂಪ್ ಮಾಡಿಬಿಟ್ಟಿದ್ದ! ಕೊನೆಗೂ ವಿಶೇಷ ಪ್ರಹಸನಕ್ಕೆ ಹ್ಯಾಪಿ ಎಂಡಿಂಗ್ ಸಿಕ್ಕಿದೆ.
ಏನಿದು ವಿಚಿತ್ರ ಪ್ರಕರಣ..?
ಶಾಂತಿ ಮಿಶ್ರಾ ಅನ್ನೋರ ಕುಟುಂಬ ರೇವಾದಲ್ಲಿ ವಾಸವಿತ್ತು. ಈ ಕುಟುಂಬದ ಸದಸ್ಯರೆಲ್ಲ ಅಂದು ಭೋಪಾಲ್ಗೆ ಹೊರಡುವ ಗಡಿಬಿಡಿಯಲ್ಲಿತ್ತು. ಭೋಪಾಲ್ಗೆ ಹೋದ ಸಂದರ್ಭದಲ್ಲಿ ಮನೆಗೆ ಕಳ್ಳರು ನುಗ್ಗಬಹುದು ಅನ್ನೋ ಆತಂಕ ಶಾಂತಿ ಮಿಶ್ರಾಗೆ ಕಾಡಿತ್ತು. ಅದೇ ಕಾರಣಕ್ಕೆ ಮನೆಯಲ್ಲಿದ್ದ ಬರೋಬ್ಬರಿ 12 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಡಸ್ಟ್ಬಿನ್ ಒಳಗೆ ಬಚ್ಚಿಟ್ಟಿದ್ದರು.
ಇನ್ನೇನು ಮನೆಯಿಂದ ಹೊರಡಬೇಕು ಅನ್ನುವಷ್ಟರಲ್ಲಿ ಶಾಂತಿ ಮಿಶ್ರಾ ಅವರ ಅಳಿಯ ಪ್ರಮೋದ್ ಕುಮಾರ್ ಮನೆಗೆ ಬರುತ್ತಾರೆ. ಹೊರಡುವ ಗಡಿಬಿಡಿಯಲ್ಲಿದ್ದ, ಅವರು ಅಳಿಯನ ಸ್ವಾಗತಿಸಿ ಮನೆಯಿಂದ ಹೊರಟು ಹೋಗುತ್ತಾರೆ. ಬ್ಯಾಡ್ಲಕ್ ಏನಂದರೆ, ಅದೇ ವೇಳೆಗೆ ಮನೆ ಮುಂದೆ ಕಸದ ಗಾಡಿ ಬಂದು ನಿಂತಿತ್ತು.
ಓ.. ಕಸದ ಗಾಡಿ ಬಂದಿದೆ ಅಂದುಕೊಂಡ ಅಳಿಯ ಮನೆಯಲ್ಲಿ ಕಸ ಇದೆಯಾ ಎಂದು ನೋಡಿದ್ದಾನೆ. ಕೋಣೆಯೊಂದರಲ್ಲಿದ್ದ ಡಸ್ಟ್ಬಿನ್ ನೋಡಿದ್ದಾರೆ. ಅದನ್ನು ತೆಗೆದುಕೊಂಡು ಹೋಗಿ ಗಾಡಿಗೆ ಡಂಪ್ ಮಾಡಿದ್ದಾರೆ. ಡಸ್ಟ್ಬಿನ್ನಲ್ಲಿ ಚಿನ್ನಾಭರಣ ಇರೋ ವಿಚಾರ ಗೊತ್ತಾಗದೇ ಪ್ರಮೋದ್ ಕುಮಾರ್ ಯಡವಟ್ಟು ಮಾಡಿಬಿಟ್ಟಿದ್ದರು. ಡಸ್ಟ್ಬಿನ್ನಲ್ಲಿ ಚಿನ್ನಾಭರಣವನ್ನು ಕಸದ ಗಾಡಿಗೆ ಸುರಿದ ಬಳಿಕ ಪ್ರಮೋದ್ ಕುಮಾರ್ ತಮ್ಮ ಮನೆಗೆ ಹೊರಟಿದ್ದಾರೆ.
ವಾಪಸ್ ಬಂದವರಿಗೆ ಕಾದಿತ್ತು ಶಾಕ್
ಮಾರನೇಯ ದಿನ ಶಾಂತಿ ಮಿಶ್ರಾ ಕುಟುಂಬ ಮನೆಗೆ ವಾಪಸ್ ಆಗಿದೆ. ಮನೆಗೆ ಬಂದು ಕೆಲವು ಗಂಟೆಗಳ ಬಳಿಕ ಡಸ್ಟ್ಬಿನ್ ಬಳಿ ಹೋಗಿ ಆಭರಣ ನೋಡಿದ್ದಾರೆ. ಆದರೆ ಅದು ಅಲ್ಲಿರಲಿಲ್ಲ. ಕಂಗಾಲಾದ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ದಾರೆ. ಮನೆಗೆ ಕಳ್ಳರು ಹೆಂಗೆ ನುಗ್ಗಿದರು ಎಂದು ಶೋಧ ನಡೆಸಿದ್ದಾರೆ. ಕೊನೆಗೆ ಅಳಿಯನಿಗೆ ಕರೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ಕಾಣೆಯಾಗಿದೆ. ಪೊಲೀಸರಿಗೆ ದೂರು ನೀಡೋಣ ಎಂದು ಹೇಳಿದ್ದಾರೆ. ಇದೇ ವೇಳೆ ಆಭರಣ ಎಲ್ಲಿತ್ತು ಎಂದು ಪ್ರಮೋದ್ ಕುಮಾರ್ ಕೇಳಿದಾಗ ಅಸಲಿ ಕಥೆ ಹೊರ ಬರುತ್ತದೆ.
ಕೂಡಲೇ ಎಚ್ಚೆತ್ತ ಪ್ರಮೋದ್ ಕುಮಾರ್, ಕಸ ತೆಗೆದುಕೊಂಡು ಹೋಗಲು ಬರುತ್ತಿದ್ದವರ ನಂಬರ್ ಸಂಗ್ರಹಿಸಿ ಕರೆ ಮಾಡಿದ್ದಾರೆ. ಅಷ್ಟರಲ್ಲಾಗಲೆ ಕಸದ ಜೊತೆ ಅದು ತುಂಬಾ ದೂರ ಹೋಗಿ ಆಗಿತ್ತು. ಕಸದ ದೊಡ್ಡ ಸ್ಥಾವರಕ್ಕೆ ತಲುಪಿಯಾಗಿತ್ತು ಅದು. ಅಲ್ಲಿ ಬರೋಬ್ಬರಿ 4 ಜಿಲ್ಲೆಗಳ ಕಸವನ್ನು ತಂದು ಸುರಿಯಲಾಗುತ್ತಿತ್ತು. ಆದರೆ ಹಠ ಬಿಡದ ಪ್ರಮೋದ್, ರೇವಾ ಘಟಕದಿಂದ ಬಂದಿದ್ದ ಕಸವನ್ನು ಚೆಕ್ ಮಾಡಿಸಲು ಕಸ ವಿಲೇವಾರಿ ಮ್ಯಾನೇಜ್ಮೆಂಟ್ ಕಂಪನಿಗೆ ತಿಳಿಸಿದ್ದಾರೆ.
ಕೊನೆಗೂ ಹ್ಯಾಪಿ ಎಂಡಿಂಗ್..!
ಕಸ ವಿಲೇವಾರಿ ಕಂಪನಿಯ ಸದಸ್ಯ ಮುಕೇಶ್ ಪ್ರತಾಪ್ ಸಿಂಗ್ ಪ್ರತಿಕ್ರಿಯಿಸಿ.. ಕಸದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸೇರಿದೆ ಎಂದು ಗೊತ್ತಾಗುತ್ತಿದ್ದಂತೆಯೇ ನಾವು ಹುಡುಕಾಡಿದ್ವಿ. ತುಂಬಾ ಗಂಟೆಗಳ ನಂತರ ಕಸದೊಳಗೆ ಬಂದಿದ್ದ ಚಿನ್ನಾಭರಣದ ಬ್ಯಾಗ್ ಪತ್ತೆಯಾಗಿದೆ. ಕೊನೆಗೆ ನಾವು ಚಿನ್ನಾಭರಣವನ್ನು ಕಳೆದುಕೊಂಡ ಕುಟುಂಬಕ್ಕೆ ತಲುಪಿಸಿದ್ದೇವೆ ಎಂದು ತಿಳಿಸಿದ್ದಾರೆ.