ಕಾರ್ಕಳ ನಗರ ಠಾಣೆಯ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್‌ ನಾಪತ್ತೆ

ಕಾರ್ಕಳ, ಅ 21: ಪೊಲೀಸ್ ಹೆಡ್‌ಕಾನ್‌ಸ್ಟೇಬಲ್‌‌ವೊಬ್ಬರು ನಾಪತ್ತೆಯಾಗಿರುವ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ನಗರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌, ಕಾಪು ಜನಾರ್ದನ ದೇವಸ್ಥಾನ ಬಳಿಯಿರುವ ಅಂಗಡಿಮನೆ ನಿವಾಸಿ ಶೃತಿನ್ ಶೆಟ್ಟಿ (35) ನಾಪತ್ತೆಯಾದವರು.

ಅವರ ಪತ್ನಿ ಪಡುಬಿದ್ರಿ ಠಾಣೆಗೆ ದೂರು ನೀಡಿದ್ದು, ಗುರುವಾರ ರಾತ್ರಿ 7.30ರ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.

ಗುರುವಾರ ರಾತ್ರಿ ಪತ್ನಿಗೆ ಕರೆ ಮಾಡಿ ನಂದಿಕೂರಿನಲ್ಲಿದ್ದು, ಮನೆಗೆ ಬರುತ್ತಿರುವುದಾಗಿ ಹೇಳಿದ್ದಾರೆ. ಆದರೆ ಇದಾದ ಬಳಿಕ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿಯಿಡೀ ಮನೆಗೆ ಬಾರದಿರುವ ಹಿನ್ನೆಲೆಯಲ್ಲಿ ಗಾಬರಿಯಾಗಿರುವ ಪತ್ನಿ ಪೂಜಾ ಶೆಟ್ಟಿಯವರು ಶುಕ್ರವಾರ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

2008ರ ಬ್ಯಾಚಿನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದ ಶೃತಿನ್ ಶೆಟ್ಟಿ ಎರಡು ತಿಂಗಳ ಹಿಂದೆಯಷ್ಟೇ ಬಡ್ತಿಯಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಆಗಿ ಬಂದಿದ್ದರು.

Scroll to Top