“ಪೇಸಿಎಂ ಪೋಸ್ಟರ್” ಅಂಟಿಸಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖಭಂಗ: ಪೋಸ್ಟರ್‌ ವಶಕ್ಕೆ ಪಡೆದ ಪೋಲೀಸರು

ವಿಜಯಪುರ:(ಸೆ.28) ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿರುವ ಪೇಸಿಎಂ ಪೋಸ್ಟರ್ ವಿವಾದ ಇದೀಗ ಮುದ್ದೇಬಿಹಾಳ ಪಟ್ಟಣದಲ್ಲೂ ಪ್ರತಿಧ್ವನಿಸಿದ್ದು ಬಸ್ ನಿಲ್ದಾಣದಲ್ಲಿ ಭಾನುವಾರ ಪೋಸ್ಟರ್ ಅಂಟಿಸಲು ಮುಂದಾಗಿದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ಪೊಲೀಸರು ಪೋಸ್ಟರ್ ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಹಾಗೂ ಎನ್.ಎಸ್.ಯೂ.ಐ ಕಾರ್ಯಕರ್ತರು ಪೇಸಿಎಂ ಪೋಸ್ಟರ್‍ಗಳ ಸಮೇತ ಆಗಮಿಸಿದ್ದರು.

ಇನ್ನೇನು ಪೋಸ್ಟರ್ ಅಂಟಿಸಬೇಕು ಎನ್ನುವಷ್ಟರಲ್ಲಿಯೇ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ಆರೀಫ್ ಮುಶಾಪುರಿ ಅವರು ಕಾರ್ಯಕರ್ತರ ಬಳಿ ಇದ್ದ ಪೇಸಿಎಂ ಪೋಸ್ಟರ್ ಗಳನ್ನು ವಶಕ್ಕೆ ಪಡೆದುಕೊಂಡರು.

ಈ ವೇಳೆ ಕಾರ್ಯಕರ್ತರೊಂದಿಗೆ ಮಾತನಾಡಿದ ಸಿಪಿಐ ಆನಂದ ವಾಘ್ಮೋಡೆ,ಜಿಲ್ಲೆಯ ಯಾವುದೇ ಭಾಗದಲ್ಲಿ ಪೋಸ್ಟರ್ ಅಂಟಿಸಲು ಪೊಲೀಸ್ ಇಲಾಖೆ ಅನುಮತಿ ಕೊಟ್ಟಿಲ್ಲ.ಪ್ರತಿಭಟನೆ ನಡೆಸಬೇಕಾದರೆ ಅನುಮತಿ ಪಡೆದುಕೊಳ್ಳುವಂತೆ ಸೂಚಿಸಿದರು.ಒಂದು ವೇಳೆ ಪೊಲೀಸ್ ಇಲಾಖೆ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದರು.

ಈ ವೇಳೆ ಯುವ ಮುಖಂಡ ಪಿಂಟು ಸಾಲಿಮನಿ ಅವರು ಮಾತನಾಡಿ ಇಡೀ ರಾಜ್ಯದಲ್ಲೆಡೆ ಈ ರೀತಿ ಪ್ರತಿಭಟನೆಗಳು ಪ್ರಾರಂಭಗೊಂಡಿವೆ ಎಲ್ಲರಿಗೂ ಒಂದೇ ರೀತಿಯ ಕಾನೂನು ರೂಪಿಸಿದೆ. ಸಂವಿದಾನ ಹೇಳುತ್ತಿದೆ. ಹೋರಾಟ ಮಾಡುವ ಪ್ರಜಾಪ್ರಭುತ್ವದ ಹಕ್ಕನ್ನೇ ಕಿತ್ತಿಕೊಳ್ಳಲು ಇಂದು ರಾಜ್ಯದ ಬಿಜೆಪಿ ಸರಕಾರ ಪೋಲಿಸ್ ಇಲಾಖೆ ಮುಂದಾಗಿದೆ. ಪಟ್ಟಣದಲ್ಲಿ ಎಲ್ಲರೂ ಯಾರು ಬೇಕಾದರೂ ಎಷ್ಟೇ ಪೋಸ್ಟರ್ ಗಳನ್ನು ಅಂಟಿಸಿಕೊಂಡಿದ್ದಾರೆ ಅವರಿಗಿಲ್ಲದೆ ಕಾನೂನು ನಮಗ್ಯಾಕೆ ಎಂದು ಸಿಪಿಐ ಆನಂದ ವಾಗ್ಮಾಡೆಯವರನ್ನು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಎನ್.ಎಸ್.ಯೂ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ,ಅಬೂಬಕರ್ ಹಡಗಲಿ,ಪ್ರಶಾಂತ ತಾರನಾಳ,ಅಪ್ಪು ಶಹಾಪೂರ,ಹರೀಶ ಬೇವೂರ,ಅಬ್ದುಲ್ ಶಿರೋಳ,ದಾವಲ್ ಗೊಳಸಂಗಿ,ಶೋಯೇಬ್ ಪಟೇಲ್,ಸಂಗು ಚಲವಾದಿ,ಮುತ್ತು ಚಲವಾದಿ,ಮಕ್ತುಮ ಪೇರಾ ಮೊದಲಾದವರು ಇದ್ದರು.

Scroll to Top