ಮಂಗಳೂರು : ನಾಡಹಬ್ಬ ದಸರಾ ನಾಡಿನಾದ್ಯಂತ ಸಂಭ್ರಮ, ಸಡಗರ ಮತ್ತು ವೈಭವೋಪೇತ ಆಚರಣೆಯೊಂದಿಗೆ ಸಂಪನ್ನಗೊಂಡಿದೆ. ದಸರೆಯನ್ನು ನಮ್ಮ ದೇಶದಲ್ಲಿ ನಾನಾರೀತಿಯಲ್ಲಿ ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಕೊಲ್ಕತ್ತಾದಲ್ಲಿ-ದಸರಾ ಹಬ್ಬದ ಅಂಗವಾಗಿ ನಡೆಯುವ ದುರ್ಗಾಪೂಜೆ ಮೈಸೂರಿನಲ್ಲಿ ನಡೆಯುವ ದಸರಾ ಅಚರಣೆಯಷ್ಟೇ ಖ್ಯಾತ.
ಮೈಸೂರಲ್ಲಿ ಜಗದ್ವಿಖ್ಯಾತ ಜಂಬೂ ಸವಾರಿಯೊಂದಿಗೆ ನಿನ್ನೆ ದಸರಾ ಉತ್ಸವ ಸಂಪನ್ನಗೊಂಡಿತು. ಶಿವಮೊಗ್ಗದಲ್ಲೂ ಜಂಬೂಸವಾರಿ ನಡೆಯುತ್ತದೆ ಅಂತ ಬಹಳ ಜನರಿಗೆ ಗೊತ್ತಿರಲಾರದು. ಮಂಗಳೂರಲ್ಲಿ ದಸರಾ ಹಬ್ಬವನ್ನು ಸ್ವಲ್ಪ ಭಿನ್ನವಾಗಿ ಆಚರಿಸಲಾಗುತ್ತದೆ. ಇಲ್ಲೂ ವೈಭವದ ದಸರಾ ಮಹೋತ್ಸವ ಮಂಗಳವಾರ ಸಂಪನ್ನಗೊಂಡಿತು.
ಮೈಸೂರಲ್ಲಿ ಉತ್ಸವ ಜಂಬೂ ಸವಾರಿ ಮತ್ತು ಟಾರ್ಚ್ ಲೈಟ್ ಪರೇಡ್ ಬಳಿಕ ಕೊನೆಗೊಂಡರೆ ಮಂಗಳೂರಲ್ಲಿ ತಾಯಿ ಶಾರದೆ ವಿಸರ್ಜನೆಯೊಂದಿಗೆ ಹಬ್ಬ ಪೂರ್ಣಗೊಳ್ಳುತ್ತದೆ.
ಕಳೆದ 9 ದಿನಗಳಿಂದ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಶ್ರೀ ದೇವರ ಆರಾಧನೆ ಅದ್ಧೂರಿಯಾಗಿ ನಡೆದುಕೊಂಡು ಬಂದಿತ್ತು. ಮೊಗ್ಗು ಮಲ್ಲಿಗೆಯ ಶಾರದಾ ಜಲ್ಲಿ, ವಿಶೇಷ ಪಟ್ಟೆ ಸೀರೆ, ವಿವಿಧ ಆಭರಣಗಳೊಂದಿಗೆ ಅಲಂಕೃತಳಾದ ಶಾರದಾ ಮಾತೆಗೆ ಮಧ್ಯಾಹ್ನದ ಬಳಿಕ ನಿಮಜ್ಜನಾ ಪೂಜೆ ನೆರವೇರಿತು.
ಸಂಜೆಯಾಗುತ್ತಿದ್ದಂತೆ ಶೋಭಾಯಾತ್ರೆಗೆ ಸಿದ್ಧತೆ ಮಾಡಿ ಮೊದಲಿಗೆ ಶ್ರೀ ಮಹಾಗಣಪತಿ ದೇವರನ್ನು, ನವದುರ್ಗೆಯರನ್ನು ಅಲಂಕೃತ ತೆರೆದ ವಾಹನದಲ್ಲಿ ಇಡಲಾಯಿತು.
ಬಳಿಕ ತಾಯಿ ಶಾರದೆಯನ್ನು ವಿಶೇಷ ವಾಹನದಲ್ಲಿ ಇರಿಸಿ ಆಕರ್ಷಕ ಶೋಭಾಯಾತ್ರೆಗೆ ನಾಂದಿ ಹಾಡಲಾಯಿತು.
ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೊ ಮುಂದೆ ಇದ್ದು, ಬಳಿಕ ಶ್ರೀ ಮಹಾಗಣಪತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ವಾಹನ ಅನುಸರಿಸಿತು.
ಆಕರ್ಷಕ ಟ್ಯಾಬ್ಲೋಗಳು, ಸ್ತಬ್ಧಚಿತ್ರಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿತು.
ಮಂಗಳವಾರ ಸಂಜೆ 4 ರ ಸುಮಾರಿಗೆ ಆರಂಭವಾದ ಈ ಶೋಭಾಯಾತ್ರೆಯು ಶ್ರೀ ಕ್ಷೇತ್ರ ಕುದ್ರೊಳಿಯಿಂದ ಹೊರಟು ರಾತ್ರಿಯಿಡೀ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 9 ಕಿ.ಮೀ. ದೂರ ಸಂಚರಿಸಿ ಬುಧವಾರ ಮುಂಜಾನೆ ವೇಳೆಗೆ ಮರಳಿ ಶ್ರೀಕ್ಷೇತ್ರಕ್ಕೆ ಆಗಮಿಸಿತು.
ನವರಾತ್ರಿಯ ಸಮಯದಲ್ಲಿ ಪೂಜಿಸಲ್ಪಟ್ಟು ದಸರಾ ಮೆರವಣಿಗೆಯಲ್ಲಿ ಸಾಗಿದ ಶಾರದಾ ಮಾತೆ ಕುದ್ರೋಳಿ ಕ್ಷೇತ್ರದ ಪುಷ್ಕರಣಿಯಲ್ಲಿ ನವದುರ್ಗೆಯರೊಂದಿಗೆ ಇಂದು ಜಲ ಸ್ತಂಭನವಾದರು. ಈ ಮೂಲಕ ಅದ್ದೂರಿ ಹಾಗೀ ವಿಶ್ವ ವಿಖ್ಯಾತ ಮಂಗಳೂರು ದಸರಾ ಸಂಪನ್ನಗೊಂಡಿತ್ತು.