ರಾಮ ಭಕ್ತರಿಗೆ ಶುಭಸುದ್ದಿ.. ರಾಮ ಮಂದಿರ ಲೋಕಾರ್ಪಣೆಗೆ ಸಿದ್ಧತೆ ; ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ರಾಮಜನ್ಮಭೂಮಿ ಟ್ರಸ್ಟ್

ಕೋಟ್ಯಾಂತರ ಹಿಂದೂಗಳ ಶತಮಾನದ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಮರ್ಯಾದಾ ಪುರುಷೋತ್ತಮನನ್ನ ಕಣ್ತುಂಬಿಕೊಳ್ಳುವ ಕಾತರಕ್ಕೆ ದಿನಗಣನೆ ಶುರುವಾಗಿದೆ.

ವಿಜಯದಶಮಿ ದಿನ ಈ ಬಗ್ಗೆ ಸುಳಿವು ನೀಡಿದ್ದ ಪ್ರಧಾನಿ ಮೋದಿ, ನಿನ್ನೆ ದೇಶವಾಸಿಗಳಿಗೆ ಮಂದಿರ ಲೋಕಾರ್ಪಣೆಯ ಶುಭ ಸುದ್ದಿ ನೀಡಿದ್ದಾರೆ.

ಶ್ರೀರಾಮಚಂದ್ರ, ಆದಿ ಪುರುಷ, ಅನಂತಗುಣ, ಮರ್ಯಾದಾ ಪುರುಷೋತ್ತಮ, ಜನಾರ್ದನ, ಜಾನಕಿವಲ್ಲಭನ ಜನ್ಮಭೂಮಿ ಅಯೋಧ್ಯೆ. ಈ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಿಸಬೇಕು ಅನ್ನೋದು ದಶಕಗಳ ಕನಸು. ಕೋಟಿಕೋಟಿ ಭಕ್ತರ ಆಶಯ. ಸದ್ಯ ರಾಮಭಕ್ತರ ಕನಸು. ಹೋರಾಟದ ಧ್ಯೇಯ ಸಾಕಾರವಾಗ್ತಿದೆ. ಅಯೋಧ್ಯೆಯಲ್ಲಿ ಭವ್ಯ, ದಿವ್ಯ ರಾಮ ಮಂದಿರ ಲೋಕಾರ್ಪಣೆಗೆ ಹತ್ತಿರವಾಗ್ತಿದೆ.

ಪ್ರಧಾನಿಗೆ ವಿದ್ಯುಕ್ತ ಆಹ್ವಾನ ನೀಡಿದ ರಾಮಜನ್ಮಭೂಮಿ ಟ್ರಸ್ಟ್

2024 ಜನವರಿ 22 ಹಿಂದೂಗಳ ಪಾಲಿಗೆ ಮರೆಯಾಗದ ದಿನ. ಇತಿಹಾಸದಲ್ಲಿ ಸ್ವರ್ಣಲೇಪಿತ ಪುಟ.. ಆವತ್ತು ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಕುರಿತು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.

ಐತಿಹಾಸಿಕ ಘಟ್ಟಕ್ಕೆ ಸಾಕ್ಷಿ ಆಗ್ತಿರೋದು ನನ್ನ ಅದೃಷ್ಟ

ನಿನ್ನೆ ಶ್ರೀರಾಮಜನ್ಮಭೂಮಿ ಟ್ರಸ್ಟ್ನ ಪ್ರಮುಖರು ದೆಹಲಿಗೆ ಆಗಮಿಸಿದ್ರು. ಪ್ರಧಾನಿ ಮೋದಿ ಭೇಟಿ ಮಾಡಿ ರಾಮನ ಪ್ರಾಣ ಪ್ರತಿಷ್ಠೆಯನ್ನ ನೆರವೇರಿಸಿಕೊಡುವಂತೆ ಅಧಿಕೃತ ಆಹ್ವಾನ ನೀಡಿದ್ರು. ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದಗಿರಿ ಮಹಾರಾಜ್, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉಪಸ್ಥಿತರಿದ್ರು.

ಬಳಿಕ ಸಂತಸ ಹಂಚಿಕೊಂಡ ಪ್ರಧಾನಿ ಮೋದಿ, ನಾನು ಆಶೀರ್ವಾದ ಪಡೆದಿದ್ದೇನೆ ಮತ್ತು ಅಂತಹ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿ ಆಗ್ತಿರೋದಕ್ಕೆ ನನ್ನ ಅದೃಷ್ಟ ಅಂತ ಟ್ವೀಟ್ ಮಾಡಿದ್ದಾರೆ.



ಟ್ರಸ್ಟ್ ವತಿಯಿಂದ 10 ಸಾವಿರ ವಿಶೇಷ ಅತಿಥಿಗಳಿಗೆ ಆಹ್ವಾನ

ಶ್ರೀರಾಮಜನ್ಮಭೂಮಿ ಟ್ರಸ್ಟ್ನ ಮೇಲ್ವಿಚಾರಣೆಯಲ್ಲಿ ದೇವಾಲಯದ ಕೆಲಸವು ಪ್ರಗತಿಯಲ್ಲಿದೆ.. ಜನವರಿ ಹೊತ್ತಿಗೆ ರಾಮ ಲಲ್ಲಾನ ವಿಗ್ರಹ ಪೂರ್ಣಗೊಳ್ಳಲಿದೆ.. ಜನವರಿ 22 ಮಧ್ಯಾಹ್ನ 12:30ಕ್ಕೆ ಪ್ರಾಣ ಪ್ರತಿಷ್ಠಾಪನೆ ಆಗಲಿದೆ.. 136 ಸನಾತನ ಸಂಪ್ರದಾಯಗಳ 25 ಸಾವಿರಕ್ಕೂ ಹೆಚ್ಚು ಹಿಂದೂ ಧಾರ್ಮಿಕ ಮುಖಂಡರನ್ನ ಪವಿತ್ರ ಸಮಾರಂಭಕ್ಕೆ ಆಹ್ವಾನಿಸಲು ಟ್ರಸ್ಟ್ ಯೋಜಿಸಿದೆ.. ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವ 25 ಸಾವಿರ ಸಂತರ ಜೊತೆಗೆ, 10 ಸಾವಿರ ವಿಶೇಷ ಅತಿಥಿಗಳಿಗೂ ಆಹ್ವಾನ ಇರಲಿದೆ..

ನವೆಂಬರ್ 2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ದೇವಾಲಯಕ್ಕೆ ಆಗಸ್ಟ್ 5, 2020ರಂದು ಪ್ರಧಾನಿ ಮೋದಿ ಅಡಿಪಾಯ ಹಾಕಿದ್ರು. ನಂತರ ಕೇಂದ್ರವು ನಿರ್ಮಾಣ ಹಂತದಲ್ಲಿ ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡಿತ್ತು. ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರವನ್ನು ಸ್ಥಾಪಿಸಿತು. ಈಗ ಪ್ರಧಾನಿ ಮೋದಿ ಅಮೃತ ಹಸ್ತದಿಂದಲೇ ಹಿಂದೂಗಳ ಪಾಲಿನ ಶ್ರದ್ಧೆಯ ಪ್ರತೀಕ ಶ್ರೀರಾಮ ಮಂದಿರ ಲೋಕಾರ್ಪಣೆ ಆಗಲಿದೆ.

Scroll to Top