ಗಗನಕ್ಕೇರುತ್ತಿದೆ ಈರುಳ್ಳಿ ಬೆಲೆ: ಗ್ರಾಹಕರ ಜೇಬಿಗೆ ಕತ್ತರಿ ನಿಶ್ಚಿತ

ಬೆಂಗಳೂರು, ಅ 28: ದೇಶಾದ್ಯಂತ ಈರುಳ್ಳಿ ಬೆಲೆಯಲ್ಲಿ ಏರಿಕೆಯಾಗಿದ್ದು, ಗ್ರಾಹಕರ ಕಣ್ಣಲ್ಲಿ ಕಣ್ಣೀರು ಹಾಕಿಸಲು ಸಜ್ಜಾಗಿದೆ. ಟೊಮೆಟೊ ದರದಲ್ಲಿ ಏರಿಕೆಯು ಜನಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗಿ ಅದರ ಬೆಲೆ ಇಳಿಕೆಯ ನಂತರ ಜನರು ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಈರುಳ್ಳಿ ದರ ಏರಿಕೆಯಾಗುವ ಸೂಚನೆ ಕಂಡು ಬಂದಿದೆ ಇದು ಜನಸಾಮಾನ್ಯರಲ್ಲಿ ಕಣ್ಣೀರು ತರಿಸಲಾರಂಭಿಸಿದೆ.

ದೇಶದ ವಿವಿಧ ಭಾಗಗಳಲ್ಲಿ ಶೇ.25ರಿಂದ ಶೇ.50 ರಷ್ಟು ಬೆಲೆ ಹೆಚ್ಚಳವಾಗಿದೆ. ಶುಕ್ರವಾರ ದೇಶದಲ್ಲಿ ಸರಾಸರಿ ಈರುಳ್ಳಿ ದರ ಪ್ರತೀ ಕೆ.ಜಿ.ಗೆ 47 ರೂ. ಇತ್ತು. ಬೆಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಂಡಿದ್ದು, ಹೆಚ್ಚುವರಿಯಾಗಿ ದಾಸ್ತಾನು ಇರುವ ಈರುಳ್ಳಿಯನ್ನು ಸಬ್ಸಿಡಿ ದರದಲ್ಲಿ ಕೆ.ಜಿ.ಗೆ 25 ರೂ.ಗಳಂತೆ ಮಾರಾಟ ಮಾಡಲು ತೀರ್ಮಾನಿಸಿದೆ.

ಸಾಮಾನ್ಯವಾಗಿ ಅಕ್ಟೋಬರ್-ನವೆಂಬರ್ ನಲ್ಲಿ ಕಟಾವಿಗೆ ಬರುವ ಖಾರಿಫ್ ಹಂಗಾಮಿನಲ್ಲಿ ನಾಟಿ ಮಾಡಿದ ಈರುಳ್ಳಿಯೂ, ಈ ವರ್ಷ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಮಾರುಕಟ್ಟೆಗೆ ಬರತೊಡಗಿದೆ.. ಮಳೆ ಇಲ್ಲದೇ ಬಿತ್ತನೆ ಪ್ರದೇಶ ಹಾಗೂ ಬೆಳೆ ಹಾನಿಯಾದ ಹಿನ್ನೆಲೆ ಬೇಡಿಕೆ ಜಾಸ್ತಿ ಹಾಗೂ ಪೂರೈಕೆ ಕಡಿಮೆಯಾಗಿ ಬೆಲೆ ಜಾಸ್ತಿಯಾಗುತ್ತಿದೆ.

ಈರುಳ್ಳಿ ಬೆಲೆ ಹೆಚ್ಚಳವಾಗಿರುವುದರಿಂದ ದಾಸ್ತಾನಿನಲ್ಲೂ ಏರುಪೇರಾಗಿದ್ದು ಈ ಹಿನ್ನಲೆ ಕರಾವಳಿಯಲ್ಲಿಯೂ ಈರುಳ್ಳಿ ದರ ಕಳೆದ 10 ದಿನಗಳಲ್ಲಿ ದುಪ್ಪಟ್ಟಾಗಿದೆ. ಕೆ.ಜಿ.ಗೆ 30ರಿಂದ 35 ರೂ. ಆಸುಪಾಸಿನಲ್ಲಿ ಇದ್ದ ಈರುಳ್ಳಿ ದರವು ಈಗ 65 ರೂ. ನಿಂದ 70 ರೂ.ಗೆ ತಲುಪಿದೆ.

You cannot copy content from Baravanige News

Scroll to Top