ಮಂಗಳೂರು : ಕುಚ್ಚಲಕ್ಕಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೆ.ಜಿ.ಗೆ 15ರಿಂದ 20 ರೂ. ಹೆಚ್ಚಳವಾಗಿ 48 ರಿಂದ 50 ರೂ. ನಲ್ಲಿ ಮಾರಾಟವಾಗುತ್ತಿರುವ ಹಿನ್ನಲೆಯಲ್ಲಿ ಕರಾವಳಿಯ ಜನತೆ ಕಂಗಾಲಾಗಿದ್ದಾರೆ.
ಕುಚ್ಚಲಕ್ಕಿ ಬೆಲೆಯಲ್ಲಿ ಭಾರೀ ಹೆಚ್ಚಳವಾದರೂ, ಭತ್ತದ ಬೆಲೆ ಕೆ.ಜಿ.ಗೆ 2-3 ರೂ. ಮಾತ್ರ ಏರಿಕೆಯಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನ್ನು ಖಾಸಗಿ ಮಿಲ್‌ಗಳಲ್ಲಿ ಸ್ಥಳೀಯ ಭತ್ತಕ್ಕೆ ಕ್ವಿಂಟಾಲ್‌ಗೆ 2,500-2,600 ರೂ. ಇದೆ. ಕಟಾವು ಚುರುಕುಗೊಂಡ ತಕ್ಷಣ ಬೆಲೆ ಇಳಿಮುಖವಾಗುವ ಭೀತಿಯೂ ಎದುರಾಗಿದೆ.
ಕರಾವಳಿ ಸೇರಿದಂತೆ ಮಲೆನಾಡು, ಬಯಲುಸೀಮೆ ಭಾಗದಲ್ಲೂ ಕಾರ್ಮಿಕರ ಕೊರತೆ, ಬೆಲೆಯ ಅಸ್ಥಿರತೆ ಇತ್ಯಾದಿ ಕಾರಣಕ್ಕೆ ಭತ್ತದ ಬೇಸಾಯ ಕುಸಿತ ಕಂಡಿದ್ದು, ಇದರಿಂದಾಗಿ ಕುಚ್ಚಲಕ್ಕಿ ಬೆಲೆ ಏರಿಕೆಯಾಗಿದೆ. ಆದರೆ ಮಧ್ಯವರ್ತಿಗಳು ಭತ್ತದ ಬೆಳೆಯನ್ನು ಏರದಂತೆ ತಡೆಯುತ್ತಿದ್ದಾರೆ ಎಂದು ರೈತರು ಆರೋಪವನ್ನು ಮಾಡುತ್ತಿದ್ದಾರೆ.
ಭತ್ತ ಹಾಗೂ ಅಕ್ಕಿ ನಡುವಿನ ಬೆಲೆ ವ್ಯತ್ಯಾಸವನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಲು ಸರಕಾರ ಮಧ್ಯಪ್ರವೇಶಿಸಿ ಕೂಡಲೇ ಭತ್ತಕ್ಕೆ ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸಬೇಕು. ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಭತ್ತ ಖರೀದಿಸದಂತೆ ಖಾಸಗಿಯವರಿಗೆ ಕಡಿವಾಣ ಹಾಕುವ ವ್ಯವಸ್ಥೆ ಜಾರಿಯಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.