ಇಂದು ಬಿಗ್‌ಬಾಸ್ ಮನೆಗೆ ವರ್ತೂರ್ ಸಂತೋಷ್ ಎಂಟ್ರಿ

ಜಾಮೀನು ದೊರೆತ ಹಿನ್ನೆಲೆಯಲ್ಲಿ ಜೈಲಿನಿಂದ ಶುಕ್ರವಾರವೇ ಹೊರಬಂದಿರುವ ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ. ದೊಡ್ಮನೆ ಪ್ರವೇಶದ ಹಿನ್ನೆಲೆಯಲ್ಲೇ ನಿನ್ನೆ ಅವರನ್ನು ಮಾಧ್ಯಮಗಳ ಮುಂದೆ ಹೋಗದಂತೆ ತಡೆಯಲಾಯಿತು. ಕನಿಷ್ಠ ಅವರ ಕುಟುಂಬದ ಜೊತೆಯೂ ಮಾತನಾಡಲಿಕ್ಕೆ ಅವಕಾಶ ಕಲ್ಪಿಸಿಲ್ಲ.

ಬಿಗ್ ಬಾಸ್ ನಿಯಮದ ಪ್ರಕಾರ, ಒಂದು ಸಲ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದ ನಂತರ ಮತ್ತೆ ಅವರು ಕುಟುಂಬದೊಂದಿಗೆ ಸಂಪರ್ಕ ಮಾಡುವುದಾಗಲಿ ಮತ್ತು ಕುಟುಂಬದ ಸದಸ್ಯರ ಜೊತೆ ಬೆರೆಯುವುದಾಗಲಿ ಮಾಡುವಂತಿಲ್ಲ. ಆ ನಿಯಮವನ್ನು ವರ್ತೂರ್ ಕೂಡ ಮಾಡಿದ್ದಾರೆ. ಹಾಗಾಗಿ ಜೈಲಿನಿಂದ ಸೀದಾ ಅವರು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ.

ನಿನ್ನೆ ರಾತ್ರಿಯೇ ಬೆಂಗಳೂರಿನ ದೊಡ್ಡ ಆಲದ ಮರ ಬಳಿ ನಿರ್ಮಿಸಲಾದ ಬಿಗ್ ಬಾಸ್ ಮನೆಗೆ ಸಂತೋಷ್ ಅವರನ್ನು ಕರೆದುಕೊಂಡು ಹೋಗಲಾಗಿದೆ. ನಂತರ ಅವರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ತಪಾಸಣೆ ನಂತರವೇ ಅವರನ್ನು ಬಿಗ್ ಬಾಸ್ ಮನೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎನ್ನುತ್ತಿವೆ ಮೂಲಗಳು.

ನಿನ್ನೆಯೇ ಬಿಗ್ ಬಾಸ್ ತಂಡವನ್ನು ಸೇರಿರುವ ಸಂತೋಷ್, ಇಂದು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ. ಅದು ಹೇಗೆ ಎನ್ನುವ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿದೆ. ಬಿಗ್ ಬಾಸ್ ಮನೆಗೆ ಹೋಗುವ ಕುರಿತು ಸಂತೋಷ್ ತಾಯಿಯೂ ಖಚಿತ ಪಡಿಸಿದ್ದಾರೆ. ಅವರ ಎಂಟ್ರಿ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

You cannot copy content from Baravanige News

Scroll to Top