ಕೇರಳ: ಪ್ರಾರ್ಥನಾ ಕೇಂದ್ರದ ಬಳಿ ಸ್ಫೋಟ; ಓರ್ವ ಮೃತ್ಯು, 20ಕ್ಕೂ ಹೆಚ್ಚು ಮಂದಿಗೆ ಗಾಯ..!!

ಕೊಚ್ಚಿ, ಅ.29: ರವಿವಾರ ಬೆಳಗ್ಗೆ ಕಲಮಸ್ಸೆರಿ ಬಳಿಯ ಪ್ರಾರ್ಥನಾ ಕೇಂದ್ರವೊಂದರ ಬಳಿ ಸಂಭವಿಸಿರುವ ಸ್ಫೋಟದಲ್ಲಿ ಓರ್ವ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾರ್ಥನಾ ಕೇಂದ್ರದ ಬಳಿಯಿದ್ದ ಜನರ ಪ್ರಕಾರ, ಮೊದಲ ಸ್ಫೋಟವು ಪ್ರಾರ್ಥನೆಯ ಮಧ್ಯಭಾಗದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

“ಇದರ ಬೆನ್ನಿಗೇ ನಾವು ಮತ್ತೆರಡು ಸ್ಫೋಟಗಳ ಸದ್ದನ್ನು ಕೇಳಿದೆವು” ಎಂದು ಪ್ರಾರ್ಥನಾ ಕೇಂದ್ರದ ಒಳಗಿದ್ದ ಹಿರಿಯ ಮಹಿಳೆಯೊಬ್ಬರು ಹೇಳಿದ್ದಾರೆ.

ಒಂದಕ್ಕಿಂತ ಹೆಚ್ಚು ಸ್ಫೋಟ ಸಂಭವಿಸಿದೆಯೆ ಎಂಬ ಕುರಿತು ಇನ್ನೂ ದೃಢಪಟ್ಟಿಲ್ಲವೆಂದು ಕಲಮಸ್ಸೆರಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕೈಗಾರಿಕಾ ಸಚಿವ ಪಿ.ರಾಜೀವ್, ಸ್ಫೋಟದ ಸ್ಥಳವನ್ನು ಸುತ್ತುವರಿಯಲಾಗಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ. ಕೆಲವರಿಗೆ ಗಂಭೀರ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಕಲಮಸ್ಸೆರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ನೆರವು ಹಾಗೂ ಸೌಲಭ್ಯಗಳಿದ್ದು, ಒಂದು ವೇಳೆ ಅಗತ್ಯ ಬಿದ್ದರೆ ಗಾಯಾಳುಗಳನ್ನು ಇತರ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಸ್ಫೋಟದ ಲಕ್ಷಣ ಅಥವಾ ಯಾರಾದರೂ ಈ ಸ್ಫೋಟದ ಹಿಂದಿದ್ದಾರೆಯೆ ಎಂಬ ಕುರಿತು ಸದ್ಯ ಯಾವುದೇ ಮಾಹಿತಿ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಸ್ಫೋಟದ ಹಿನ್ನೆಲೆಯಲ್ಲಿ ಸರ್ಕಾರಿ ಆರೋಗ್ಯ ಸೇವಾ ವೃತ್ತಿಪರರು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚಿಸಿದ್ದಾರೆ.

ಘಟನೆ ನಡೆದಾಗ ಪ್ರಾರ್ಥನಾ ಕೇಂದ್ರದ ಸಭಾಂಗಣದಲ್ಲಿ 2,000ಕ್ಕೂ ಹೆಚ್ಚು ಮಂದಿ ಹಾಜರಿದ್ದರು ಎಂದು ಮತ್ತೊಬ್ಬ ವ್ಯಕ್ತಿ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಬೆಳಗ್ಗೆ 9 ಗಂಟೆಯ ವೇಳೆಗೆ ಸ್ಫೋಟದ ಕುರಿತು ಕರೆ ಬಂದಿದ್ದು, ಆ ಕರೆಯಲ್ಲಿ ಪೊಲೀಸರ ನೆರವಿಗಾಗಿ ಮನವಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಘಟನೆಯ ಕುರಿತು ಟಿವಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿರುವ ದೃಶ್ಯಾವಳಿಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಸ್ಥಳದಿಂದ ಜನರನ್ನು ತೆರವುಗೊಳಿಸುತ್ತಿರುವುದನ್ನು ಕಾಣಬಹುದಾಗಿದೆ.

ಕೆಲವು ವ್ಯಕ್ತಿಗಳು ಸಭಾಂಗಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಹಾನಿಗೊಂಡ ಕುರ್ಚಿಗಳನ್ನು ಬಳಸಿ ಬೆಂಕಿಯನ್ನು ನಂದಿಸಲು ಯತ್ನಿಸುತ್ತಿರುವ ದೃಶ್ಯಗಳೂ ವಿಡಿಯೊದಲ್ಲಿ ಕಂಡು ಬಂದಿವೆ.”

Scroll to Top