ಕೋಲಾರ : ಅಗಲಿದವರ ಆತ್ಮಗಳನ್ನು ಪೂಜಿಸುವ ವಿಶಿಷ್ಟ ಆಚರಣೆಯೇ ಮಸಣದ ಹಬ್ಬ. ಈ ಹಬ್ಬವನ್ನು ಕೋಲಾರದ ಕೆಜಿಎಫ್ನಲ್ಲಿ ಆಚರಿಸಲಾಗುತ್ತಿದೆ.
ಇದನ್ನ ಇಲ್ಲಿನ ಕ್ರಿಶ್ಚಿಯನ್ನರು ಸ್ಮಶಾಣ ಹಬ್ಬ, ಸಕಲ ಸಂತರ ದಿನ ಅಥವಾ ಆಲ್ ಸೋಲ್ಸ್ ಡೇ ಆಚರಣೆ ಎನ್ನತ್ತಾರೆ. ವಿಶೇಷವಾಗಿ ಇಂಗ್ಲೆಂಡ್ನ ಪ್ರಭಾವ ಹೊಂದಿರುವ ಕೆಜಿಎಫ್ನಲ್ಲಿ ಪ್ರತಿ ವರ್ಷ ನವೆಂಬರ್ 2, ಹಾಗೂ 3 ರಂದು ನಡೆಯುವ ಸ್ಮಶಾನ ಹಬ್ಬವನ್ನು ಆಚರಿಸಲಾಗುತ್ತದೆ.
ತಮ್ಮನ್ನಗಲಿದ ರಕ್ತ ಸಂಬಂಧಿಗಳ ಆತ್ಮಗಳಿಗೆ ಪೂಜೆ ಮಾಡುವ ದಿನವಾಗಿದ್ದು, ಈ ದಿನವನ್ನ ಸಕಲ ಸಂತರ ದಿನ ಎಂದು ಪ್ರಮುಖವಾಗಿ ಆಚರಣೆ ಮಾಡೋದು ಇಲ್ಲಿನ ವಿಶೇಷ.
ಕೆಜಿಎಫ್ನಲ್ಲಿ ಎಲ್ಲಾ ಧರ್ಮಿಯರು ವಿಶೇಷವಾಗಿ ಈ ಸ್ಮಶಾನ ಹಬ್ಬದಲ್ಲಿ ಭಾಗವಹಿಸುವುದು ಮತ್ತೊಂದು ವಿಶೇಷ. ಈ ದಿನದಂದು ಕುಟುಂಬದ ಎಲ್ಲಾ ಸದಸ್ಯರು ಒಂದೆಡೆ ಸೇರಿ ಸಮಾಧಿಗಳಿಗೆ ಬಗೆ ಬಗೆಯಾಗಿ ಅಲಂಕಾರ ಮಾಡಿ, ಮೃತರು ಬದುಕಿದ್ದಾಗ ಇಷ್ಟಪಡುತ್ತಿದ್ದ ಊಟ, ಉಪಚಾರಗಳನ್ನು ಸಮಾದಿಯ ಮುಂದಿಟ್ಟು, ಪಾದ್ರಿಯು ಹೇಳಿಕೊಡುವ ಪ್ರಾರ್ಥನೆಯನ್ನು ಮಾಡಿ ಮೃತರಿಗೆ, ಮೃತರ ಆತ್ಮಗಳಿಗೆ ಪೂಜೆ ಸಲ್ಲಿಸುತ್ತಾರೆ.
ಮನುಷ್ಯ ಸತ್ತಮೇಲೆ ಅವನ ಆತ್ಮ ಸಾಯೋದಿಲ್ಲ ಅನ್ನೋ ನಂಬಿಕೆ. ಹಾಗಾಗಿಯೇ ಎಲ್ಲಾ ಧರ್ಮಗಳಲ್ಲೂ ಕೂಡಾ ಮೃತರಿಗೆ ಪೂಜೆ ಸಲ್ಲಿಸುವ ಪದ್ಧತಿ ಇದೆ. ವಿಶೇಷವಾಗಿ ಮೃತರು ಮತ್ತೆ ಹುಟ್ಟಿ ಬರಬಹುದು, ಇಲ್ಲವಾದಲ್ಲಿ ಮೃತರ ಬಳಿಗೆ ನಾವೇ ಸೇರಿಕೊಳ್ಳುತ್ತೇವೆ ಅನ್ನೋ ನಂಬಿಕೆ ಕೂಡಾ ಬಲವಾಗಿದೆ. ಹಾಗಾಗಿಯೇ ಸ್ಮಶಾನ ದಿನದಂದು ಮೃತರ ಆತ್ಮಗಳಿಗೆ ಪೂಜೆ ಮಾಡಿ ಸಂತೈಸಲಾಗುತ್ತೆ ಅನ್ನೋ ನಂಬಿಕೆ ಇಲ್ಲಿ ಹಲವು ವರ್ಷಗಳಿಂದ ನಡೆದು ಬಂದಿದೆ.