ಶಿವಮೊಗ್ಗ, ನ.03: ತಾಲೂಕಿನ ಸಕ್ರೆಬೈಲು ಬಿಡಾರದ ಆನೆ ಭಾನುಮತಿ (37) ಶನಿವಾರ ಹೆಣ್ಣು ಮರಿಗೆ ಜನ್ಮನೀಡಿದೆ. ತಾಯಿ ಹಾಗೂ ಮರಿ ಆನೆ ಎರಡೂ ಆರೋಗ್ಯದಿಂದ ಇವೆ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿಗೆ ಗರ್ಭಿಣಿ ಭಾನುಮತಿ ಆನೆ ಬಿಡಾರದಿಂದ ಕಾಡಿಗೆ ಮೇಯಲು ಹೋದಾಗ ಆಕೆಯ ಬಾಲಕ್ಕೆ ಕಿಡಿಗೇಡಿಗಳು ಕತ್ತಿಯಿಂದ ಗಾಯ ಮಾಡಿದ್ದರು. ವೈದ್ಯರು ಅದಕ್ಕೆ ಹೊಲಿಗೆ ಹಾಕಿ ಸೂಕ್ತ ಚಿಕಿತ್ಸೆ ನೀಡಿದ್ದರು. ನಂತರ ಭಾನುಮತಿ ಚೇತರಿಸಿಕೊಂಡಿದೆ. ಈ ಬಗ್ಗೆ ಅರಣ್ಯ ಇಲಾಖೆ ತನಿಖೆಗೂ ಸಹ ಆದೇಶಿಸಿತ್ತು.
ಇದಾದ ಮೂರನೇ ವಾರಕ್ಕೆ ಭಾನುಮತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಾಲ್ಕನೇ ಮರಿ ಇದಾಗಿದೆ. ಈಕೆಯ ಯಾವುದೇ ಮರಿಗಳು ಬೆಳವಣಿಗೆ ಆಗಿಲ್ಲವೆಂದು ತಿಳಿದು ಬಂದಿದೆ.
ಸದ್ಯ ಸಕ್ರಬೈಲಿನಲ್ಲಿ ಆನೆಯ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ದಸರಾ ಮೆರವಣಿಗೆಗೆ ಬಂದ ನೇತ್ರಾವತಿ ಎಂಬ ಆನೆ ಸಹ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಇದಾದ 15 ದಿನಕ್ಕೆ ಭಾನುಮತಿ ಮತ್ತೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ. ಹೀಗಾಗಿ ಸಕ್ರೆಬೈಲು ಆನೆ ಬಿಡಾರದಲ್ಲಿ 6 ಹೆಣ್ಣು ಮತ್ತು 16 ಗಂಡು ಆನೆಗಳಿವೆ.