ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿಗಳಿಂದ 1 ಕೋಟಿ ರೂ ಘೋಷಣೆ – ಅಶೋಕ್ ರೈ

ಪುತ್ತೂರು : ಬೆಂಗಳೂರು ಅರಮನೆ ಮೈದಾನದಲ್ಲಿ ನ.24ರಿಂದ 26 ರತನಕ ನಡೆಯಲಿರುವ ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ರೂ ಒಂದು ಕೋಟಿ ಘೋಷಣೆ ಮಾಡಿದ್ದಾರೆ.



ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಕರಾವಳಿಯ ಜನಪದ ಕ್ರೀಡೆಯಾದ ಕಂಬಳವನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ. ಈಗಾಗಲೇ ಕಂಬಳಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಬೆಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕಂಬಳ ಸಮಿತಿ ನೇಮಕ ಮಾಡಿದೆ. ಕರೆ ಮುಹೂರ್ಥದ ಬಳಿಕ ಅನೇಕ ಸಚಿವರು ಕಂಬಳ ನಡೆಯುವ ಅರಮನೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸರಕಾರದಿಂದ ಸರ್ವ ರೀತಿಯ ಸಹಕಾರವನ್ನು ನೀಡುವುದಾಗಿ ಈ ಹಿಂದೆ ಘೋಷಣೆಯನ್ನು ಮಾಡಿದ್ದರು.

ಬೆಂಗಳೂರು ಕಂಬಳಕ್ಕೆ ಖ್ಯಾತ ಬಾಲಿಹುಡ್ ನಟಿಯರು, ಸೆಲೆಬ್ರಿಟಿಗಳು ಆಗಮಿಸಲಿದ್ದು ಸುಮಾರು 8 ಲಕ್ಷ ಮಂದಿ ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಮಿತಿ ಅಧ್ಯಕ್ಷರಾದ ಪುತ್ತೂರು ಶಾಸಕರಾದ ಅಶೋಕ್ ರೈ ತಿಳಿಸಿದ್ದರು. ಇದೀಗ ಕಂಬಳಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ.

ಕಂಬಳ ಸಮಿತಿಯವರ ಉತ್ಸಾಹವನ್ನು ಕಂಡ ಸಿ ಎಂ ರವರು ಕಂಬಳಕ್ಕೆ ಸರಕಾರದಿಂದ ಒಂದು ಕೋಟಿ ರೂ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದು ಕಂಬಳದ ಮೆರುಗನ್ನು ಹೆಚ್ಚಿಸಿದೆ.

ಕಂಬಳದಲ್ಲಿ ಸುಮಾರು 150 ಕ್ಕೂಮಿಕ್ಕಿ ಜೋಡಿ ಕಂಬಳ ಕೋಣಗಳು ಭಾಗವಹಿಸಲಿದ್ದು ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಕೋಣಗಳನ್ನು ಕರೆದೊಯ್ಯಲಾಗುತ್ತದೆ. ಕಂಬಳ ಕೋಣಗಳಿಗೆ ಬೇಕಾದ ಆಹಾರ ಮತ್ತು ನೀರನ್ನು ಕೂಡಾ ಮಂಗಳೂರಿನಿಂದಲೇ ವ್ಯವಸ್ಥೆ ಮಾಡಲಾಗುತ್ತಿದೆ. ಖ್ಯಾತ ಸೆಲೆಬ್ರಿಟಿಗಳಾದ ಐಶ್ವರ್ಯಾ ರೈ, ಅನುಷ್ಕಾ ಶೆಟ್ಡಿ, ರಜನಿಕಾಂತ್ ಸೇರಿದಂತೆ ರಾಷ್ಡ್ರಿಯ ಮತ್ತು ಅಂತರ ರಾಷ್ಡ್ರೀಯ ಖ್ಯಾತಿಯ ಘಟಾನುಘಟಿ ಪ್ರಮುಖರು ಭಾಗವಹಿಸಿ ಕಂಬಳಕ್ಕೆ ತಾರಾ ಮೆರುಗನ್ನು ನೀಡಲಿದ್ದಾರೆ.

ಕಂಬಳ ಕರೆಮುಹೂರ್ತ ನಡೆಸಲಾಗಿದ್ದು ಕರೆ ನಿರ್ಮಾಣವೂ ಭರದಿಂದ ಸಾಗುತ್ತಿದೆ. ಕಂಬಳಕ್ಕೆ ಸರಕಾರದ ಸಹಾಯ ಹಸ್ತ ದೊರೆಯುವುದರೊಂದಿಗೆ ಬೆಂಗಳೂರುಕಂಬಳ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ.

You cannot copy content from Baravanige News

Scroll to Top