ಬೆಂಗಳೂರು, ನ.11: ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ನೂತನ ರಾಜ್ಯಾಧ್ಯಕ್ಷರಾದ ಆಯ್ಕೆ ಆದ ಬಳಿಕ ಮೊದಲು ಬೂತ್ ಮಟ್ಟದ ಅಧ್ಯಕ್ಷರ ಮನೆಗೆ ಭೇಟಿ ಕೊಟ್ಟು ಪಕ್ಷ ಸಂಘಟನೆ ಆರಂಭಿಸಿದರು.
ಈ ಬಗ್ಗೆ ಮಾತನಾಡಿರುವ ಬಿ.ವೈ ವಿಜಯೇಂದ್ರ ಅವರು ಕಾಂಗ್ರೆಸ್ ನಾಯಕರು ಹಾಗೂ ತಮ್ಮ ರಾಜಕೀಯ ವಿರೋಧಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಿಜಯಪತಾಕೆ ಹಾರಿಸೋದೇ ನಮ್ಮೆಲ್ಲರ ಗುರಿ. ರಾಜ್ಯದ ಎಲ್ಲಾ ಹಿರಿಯ ನಾಯಕರ ಜೊತೆ ಕೂತು ಚರ್ಚೆ ಮಾಡಿ ದೊಡ್ಡ ಸಂದೇಶ ಕೊಡೋ ನಿಟ್ಟಿನಲ್ಲಿ ತಂತ್ರ ಮಾಡ್ತೀನಿ. ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಸೀಟ್ ಗೆಲ್ಲುವ ಮೂಲಕ ಪ್ರಧಾನಿ ಮೋದಿಯವರ ಕೈ ಬಲಪಡಿಸುತ್ತೇವೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ತೀವ್ರ ಭೀಕರ ಬರಗಾಲ ಎದುರಾಗಿದೆ. ಈ ಸಂದರ್ಭದಲ್ಲಿ ಸಿಎಂ ನಾನು, ನಾನಾಗಬೇಕು ಅಂತ ಕಾಂಗ್ರೆಸ್ ನಾಯಕರು ಹಾದಿ ಬೀದಿಯಲ್ಲಿ ಕಿತ್ತಾಡುತ್ತಾ ಇದ್ದಾರೆ. ಬರಗಾಲದ ಸಂದರ್ಭದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡೋ ಮೂಲಕ ರಾಜ್ಯ ಸರ್ಕಾರ ನಗೆಪಾಟಲಿಗೀಡಾಗಿದೆ ಎಂದು ವಿಜಯೇಂದ್ರ ಹೇಳಿದರು.
ಇನ್ನು, ಆಡಳಿತ ಪಕ್ಷದ ಕಿವಿ ಹಿಂಡಲು ನಾನು ರಾಜ್ಯ ಪ್ರವಾಸ ಮಾಡುತ್ತೇವೆ. ಜಿಲ್ಲೆ, ಜಿಲ್ಲೆಗಳಿಗೂ ಹೋಗಿ ಜನರ ಸಮಸ್ಯೆಯನ್ನು ಆಲಿಸುತ್ತೇನೆ ಎಂದ ವಿಜಯೇಂದ್ರ ಅವರು ಹಿರಿಯರ ಆಶೀರ್ವಾದದಿಂದ ಮುಂದಿನ ಸವಾಲುಗಳನ್ನ ಮೆಟ್ಟಿ ನಿಲ್ಲುತ್ತೇವೆ. ಹಳೆ ಬೇರು ಹೊಸ ಚಿಗುರನ್ನು ಹೇಗೆ ಮ್ಯಾನೇಜ್ ಮಾಡುತ್ತೇನೆ ಅನ್ನೋದನ್ನ ಕಾಲವೇ ಉತ್ತರಿಸಲಿದೆ ಎಂದು ಮಾರ್ಮಿಕವಾದ ಮಾತನಾಡಿದ್ದಾರೆ.