ಕುಂದಾಪುರ, ನ 16: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರು ತಾಲೂಕಿನ ಉಪ್ಪುಂದ ಸಮೀಪದ ನಂದನವನ ಜಂಕ್ಷನ್ ನಲ್ಲಿ ಒಂದೇ ದಿನದ ಅವಧಿಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಪ್ರತ್ಯೇಕ ಅಪಘಾತಗಳಲ್ಲಿ ಸಾವನ್ನಪ್ಪಿದ ಬೈಕ್ ಸವಾರರನ್ನು ಕುಪ್ಪಯ್ಯ ಹಾಗೂ ಸುಬ್ರಹ್ಮಣ್ಯ ಎಂದು ಗುರುತಿಸಲಾಗಿದೆ.
ಬುಧವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ಕುಪ್ಪಯ್ಯ ಎಂಬುವರು ಚಂದ್ರ ಎಂಬುವರನ್ನು ಕುಳ್ಳಿರಿಸಕೊಂಡು ತನ್ನ ಸ್ಕೂಟಿಯಲ್ಲಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಪ್ರಯಾಣಿಸುತ್ತಿದ್ದರು. ನಂದನವನ ಜಂಕ್ಷನ್ ನಲ್ಲಿ ಬಲ ಬದಿ ರಸ್ತೆಗೆ ತಿರುವು ಪಡೆಯುತ್ತಿದ್ದ ಸಂದರ್ಭ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಚಲಿಸುತ್ತಿದ್ದ ಸೆಲಾರಿಯೋ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿ ಸವಾರರು ರಸ್ತೆಗೆ ಬಿದ್ದು ಬೈಕ್ ಚಲಾಯಿಸುತ್ತಿದ್ದ ಕುಪ್ಪಯ್ಯ ರವರಿಗೆ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿ ಕೈ ಕಾಲುಗಳಿಗೆ ರಕ್ತಗಾಯವಾಗಿ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಮಣಿಪಾಲ ಕೆ ಖಾಸಗೀ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಗಾಯಾಳು ಹಿಂಬದಿ ಸವಾರ ಚಂದ್ರ ಕುಂದಾಪುರದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೊಂದು ಘಟನೆಯಲ್ಲಿ ಬುಧವಾರ ರಾತ್ರಿ 8.35ರ ಸುಮಾರಿಗೆ ಸುಬ್ರಹ್ಮಣ್ಯ ಎಂಬಾತ ತನ್ನ ಕೆಟಿಎಂ ಬೈಕಿನಲ್ಲಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ. ಇದೇ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಓವರ್ ಟೇಕ್ ಮಾಡಿ ಸೂಚನೆ ನೀಡದೇ ಬಲಬದಿಯ ನಂದನವನ ಜಂಕ್ಷನ್ ನಲ್ಲಿ ಯೂ ಟರ್ನ್ ತೆಗೆದುಕೊಂಡಿದ್ದಾನೆ. ಈ ಸಂದರ್ಭ ನಿಯಂತ್ರಣ ತಪ್ಪಿ ಬೈಕ್ ಟಿಪ್ಪರ್ ಗೆ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಸಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಎರಡೂ ಪ್ರಕರಣಗಳು ಬೈಂದುರು ಠಾಣೆಯಲ್ಲಿ ದಾಖಲಾಗಿವೆ.