ಮಂಗಳೂರು : ನದಿಯಲ್ಲಿ ಈಜಲು ತೆರಳಿದ್ದ ವೇಳೆ ಆಯತಪ್ಪಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಸುರತ್ಕಲ್ ಮರವೂರು ರೈಲ್ವೇ ಸೇತುವೆಯ ಕೆಳಗಿನ ನದಿಯಲ್ಲಿ ನಡೆದಿದೆ.
ಮೃತರನ್ನು ಮೂಲತಃ ಬಜ್ಪೆ ನಿವಾಸಿ ಪ್ರಸ್ತುತ ಸುರತ್ಕಲ್ ಸಮೀಪದ ಚೊಕ್ಕಬೊಟ್ಟುವಿನಲ್ಲಿ ವಾಸವಾಗಿರುವ ಶಾಕಿರ್ (30) ಎಂದು ಗುರುತಿಸಲಾಗಿದೆ.
ಮೃತ ಶಾಕಿರ್ ತನ್ನ 4 ಮಂದಿ ಸ್ನೇಹಿತರೊಂದಿಗೆ ಮರವೂರು ರೈಲ್ವೇ ಸೇತುವೆಯ ಕೆಳ ಭಾಗಕ್ಕೆ ಈಜಲು ತೆರಳಿದ್ದರು. ಈ ವೇಳೆ ಶಾಕಿರ್ ಕಾಲು ಜಾರಿ ಆಯತಪ್ಪಿ ನದಿಗೆ ಬಿದ್ದು ನೀರಿನಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಬಳಿಕ ಜೊತೆಗಿದ್ದ ಸ್ನೇಹಿತರು, ಪೊಲೀಸರು ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಬಂದ ಕಾವೂರು ಪೊಲೀಸರು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.