ಉಡುಪಿ: ಹೆರಿಗೆ ವೇಳೆ ಮಗು ಸಾವು; ಕುಟುಂಬಸ್ಥರಿಂದ ಪ್ರತಿಭಟನೆ..!

ಉಡುಪಿ, ನ.21: ಹೆರಿಗೆ ವೇಳೆ ಮಗು ಮೃತಪಟ್ಟಿದ್ದು, ಉಡುಪಿ ಜಿಲ್ಲೆ ಕುಂದಾಪುರ ಸರ್ಕಾರಿ ಆಸ್ಪತ್ರೆ ಮುಂದೆ ಕುಟುಂಬಸ್ಥರು ಅಹೋ ರಾತ್ರಿ ಪ್ರತಿಭಟನೆ ಮಾಡಿದರು. ಬೈಂದೂರಿನ ಗಂಗೊಳ್ಳಿ ಮೂಲದ ಶ್ರೀನಿವಾಸ ಖಾರ್ವಿ ಮತ್ತು ಜ್ಯೋತಿ ದಂಪತಿಯ ಮಗು ಹೆರಿಗೆ ಸಂದರ್ಭದಲ್ಲೇ ಸಾವನ್ನಪ್ಪಿದೆ. ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ದೂರು ಕೇಳಿಬಂದಿದೆ.

ನವೆಂಬರ್ 17 ರಂದು ಹೆರಿಗೆ ನೋವಿನ ಹಿನ್ನೆಲೆ ಕುಂದಾಪುರ ತಾಲೂಕು ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಜ್ಯೋತಿಯವರನ್ನು ದಾಖಲು ಮಾಡಲಾಗಿತ್ತು. ಹೆರಿಗೆ ಮಾಡಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದು, ಕುಟುಂಬ ನೋವಿನಿಂದ ಆಕ್ರೋಶಗೊಂಡಿದೆ. ಪ್ರಕರಣ ಕುರಿತು ಸಂಪೂರ್ಣ ತನಿಖೆ ನಡೆಸಬೇಕು, ಡಿಸಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಬರಲು ಆಗ್ರಹಿಸಿದೆ.

ಡಿಸಿ ಸ್ಥಳಕ್ಕಾಗಮಿಸಿ ಕುಟುಂಬದ ಮತ್ತು ವೈದ್ಯರ ಜೊತೆ ಮಾತಕತೆ ಮಾಡಿದ್ದಾರೆ. ಮಗುವಿನ ಹೊಕ್ಕುಳ ಬಳ್ಳಿ ಸುತ್ತಿಕೊಂಡು ಸಾವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದ ಹೆರಿಗೆ ಮಾಡಿಸಲಾಗಿದೆ ಎಂದು ಕುಟುಂಬ ಆರೋಪಿಸಿದ್ದು, ಡಿಸಿ ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ತನಿಖಾ ಸಮಿತಿ ರಚನೆ ಮಾಡುವ ತೀರ್ಮಾನಕ್ಕೆ ಬಂದಿದ್ದು, ಕುಟುಂಬಸ್ಥರು ಪ್ರತಿಭಟನೆ ಕೈಬಿಟ್ಟಿದ್ದಾರೆ

You cannot copy content from Baravanige News

Scroll to Top