ಕಾರ್ಕಳ, ನ.25: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೌಡೂರು ಪರಿಸದಲ್ಲಿ ಚಿರತೆಗಳ ಭೀತಿ ಹೆಚ್ಚಿದೆ, ಇದುವರೆಗೆ ಸಾಕು ಪ್ರಾಣಿಗಳ ಮೇಲೆ ಮಾತ್ರ ದಾಳಿಮಾಡುತ್ತಿದ್ದ ಚಿರತೆಗಳು ಹಾಡಹಗಲೇ ಮನುಷ್ಯರ ಮೇಲೂ ದಾಳಿ ಆರಂಭಿಸಿದ್ದು ಜನ ಭಯಭೀತರಾಗಿದ್ದಾರೆ.
ಸಾಣೂರು, ಕಾರ್ಕಳ ಕಾಳಿಕಾಂಬಾ ಪರಿಸರ, ಕಣಜಾರು, ಪಳ್ಳಿ, ನೀರೆ ಬೈಲೂರು, ಕಾಂತಾವರ, ಬೆಳ್ಮಣ್, ಮುಡಾರು, ಮುಂಡ್ಲಿ, ಹೆಬ್ರಿ ತಾಲೂಕಿನ ವರಂಗ, ಮುನಿಯಾಲು, ಅಂಡಾರು ಪರಿಸರದಲ್ಲಿ ಚಿರತೆಗಳು ಕಾಣಸಿಗುವುದು ಸಾಮಾನ್ಯವಾಗಿದೆ. ಕೌಡೂರು ಪರಿಸರದಲ್ಲಿ ಕಳೆದ 24 ಗಂಟೆಯಲ್ಲಿ ನಾಲ್ವರ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ.
ಗುರುವಾರ ಮುಂಜಾನೆ ನಾಗಂಟೆಲ್ ಎಂಬಲ್ಲಿ ಮನೆಯೊಂದರ ನಾಯಿಯನ್ನು ಹಿಡಿಯಲು ಚಿರತೆ ಹೊಂಚು ಹಾಕಿ ದಾಳಿ ನಡೆಸಿತ್ತು. ಈ ವೇಳೆ ಮನೆಯ ಯಜಮಾನ ಸುಧೀರ್ ನಾಯ್ಕ್ ನಾಯಿಯನ್ನು ರಕ್ಷಿಸಲು ಮುಂದಾದ ವೇಳೆ ಚಿರತೆ ಸೂಧೀರ್ ಮೇಲೆರಗಿ ಗಾಯಗೊಳಿಸಿದೆ., 11-30ರ ಸುಮಾರಿಗೆ ಬೈಕ್ನಲ್ಲಿ ಸಾಗುತ್ತಿದ್ದ ನಿಧೀಶ್ ಆಚಾರ್ಯ ಎಂಬವರ ಚಿರತೆ ದಾಳಿ ಯತ್ನ ನಡೆಸಿದ್ದು ಅದೃಷ್ಟವಶಾತ್ ನಿಧೀಶ್ ಅಪಾಯದಿಂದ ಪಾರಾಗಿದ್ದಾರೆ.
ಸ್ವಲ್ಪ ಹೊತ್ತಿನ ಬಳಿಕ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಸದಾನಂದ ಪುತ್ರನ್ ಅವರ ತಲೆ ಮೇಲೆ ಚಿರತೆ ಹಾರಿದ್ದು, ಹೆಲ್ಮೆಟ್ ಹಾಕಿಕೊಂಡಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಇದೇ ಪರಿಸರದಲ್ಲಿ ಜಯಂತಿ ನಾಯ್ಕ್ ಮತ್ತು ಮಲ್ಲಿಕಾ ನಾಯ್ಕ್ ಎಂಬವರು ಮೇವಿಗಾಗಿ ದನವನ್ನು ಕಟ್ಟಲು ಹೋದ ಸಂದರ್ಭ ಜಯಂತಿ ನಾಯ್ಕ್ ಅವರ ಮೇಲೆ ಚಿರತೆ ದಾಳಿ ಮಾಡಿದೆ. ಅವರ ಕೈಗಳಿಗೆ ತೀವ್ರವಾದ ಗಾಯಗಳಾಗಿದೆ.
ಕೌಡೂರು ಪರಿಸರದಲ್ಲಿ ಇತ್ತೀಚೆಗೆ ಚಿರತೆಗಳ ಹಾವಳಿ ಮಿತಿ ಮೀರಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ರಾತ್ರಿ ಸಮಯದಲ್ಲಿ ಚಿರತೆ ನಾಯಿಗಳನ್ನು, ಕೋಳಿಗಳನ್ನು ಭೇಟೆಯಾಡುವುದು ಸಾಮಾನ್ಯವಾಗಿದೆ. ಇದೀಗ ಹಾಡು ಹಗಲೇ ಈ ಪರಿಸರದಲ್ಲಿ ಚಿರತೆ ಓಡಾಟ ಕಾಣಿಸಿಕೊಂಡಿದ್ದು ಪುಟ್ಟ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹೆದರುವ ಪರಿಸ್ಥಿತಿ ನೀರ್ಮಾಣವಾಗಿದ್ದು ಅರಣ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕೆಂದು ಜನತೆ ಆಗ್ರಹಿಸಿದೆ.