ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶುಕ್ರವಾರ ಉತ್ಥಾನದ್ವಾದಶಿಯಂದು ಬೆಳಗ್ಗೆ ತುಳಸೀಪೂಜೆ, ಸಂಜೆ ಕ್ಷೀರಾಬ್ದಿ ಪೂಜೆ, ಬಳಿಕ ತೆಪ್ಪೋತ್ಸವ ಸಹಿತ ನಾಲ್ಕು ದಿನಗಳ ಲಕ್ಷದೀಪೋತ್ಸವ ನಡೆಯುವ ಮೂಲಕ ವಾರ್ಷಿಕ ರಥೋತ್ಸವ ಆರಂಭಗೊಂಡಿತು.
ದ್ವಾದಶಿಯಾದ ಕಾರಣ ಮುಂಜಾವವೇ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು. ಬಳಿಕ ತುಳಸೀ ಪೂಜೆಯನ್ನು ನೆರವೇರಿಸಿದರು. ಇದಕ್ಕೂ ಮುನ್ನ ಒಂದು ತಿಂಗಳಿಂದ ನಡೆಯುತ್ತಿದ್ದ ಪಶ್ಚಿಮಜಾಗರ ಪೂಜೆಯನ್ನು ಸಮಾಪನಗೊಳಿಸಿದರು. ಅಪರಾಹ್ನ ಮಧ್ವಸರೋವರದ ಮಧ್ಯದ ಮಂಟಪದಲ್ಲಿ ಕ್ಷೀರಾಬ್ದಿ ಅರ್ಘ್ಯವನ್ನು ನೀಡಲಾಯಿತು. ರಾತ್ರಿವರೆಗೆ ನಡೆದ ವಿವಿಧ ಪೂಜೆ ಗಳಲ್ಲಿ ಪರ್ಯಾಯ ಕೃಷ್ಣಾಪುರ, ಪಲಿಮಾರು ಹಿರಿಯ, ಕಿರಿಯ, ಅದಮಾರು ಕಿರಿಯ, ಪೇಜಾವರ, ಕಾಣಿ ಯೂರು, ಶೀರೂರು ಸ್ವಾಮೀಜಿಯವರು ಪಾಲ್ಗೊಂಡರು.
ಅಪರಾಹ್ನ ರಥಬೀದಿಯಲ್ಲಿ ಅಳವಡಿಸಿದ ದಳಿಗಳ ಮೇಲೆ ಗೋಮಯವನ್ನು ಇಟ್ಟು ಅದರ ಮೇಲೆ ಹಣತೆ ಇಡುವ ಮುಹೂರ್ತವನ್ನು ವಿವಿಧ ಸ್ವಾಮೀಜಿಯವರು ನೆರವೇರಿಸಿದರು. ಸಂಜೆ ಕ್ಷೀರಾಬ್ದಿ ಬಳಿಕ ರಾತ್ರಿ ಪೂಜೆ ನಡೆಯಿತು. ಪೂಜೆಯ ಬಳಿಕ ಚಾತುರ್ಮಾಸ ವ್ರತ ಕಾಲದಲ್ಲಿ ಒಳಗಿದ್ದ ಉತ್ಸವ ಮೂರ್ತಿಯನ್ನು ಬಿರುದಾ ವಳಿಗಳಲ್ಲಿ ಹೊರಗೆ ತಂದು ರಾತ್ರಿ ಆಕರ್ಷಕ ತೆಪ್ಪೋತ್ಸವ ನಡೆಯಿತು.
ತೆಪ್ಪೋತ್ಸವದ ಬಳಿಕ ರಥೋತ್ಸವ ನಡೆಯಿತು. ಶ್ರೀಕೃಷ್ಣ ಮುಖ್ಯಪ್ರಾಣ, ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ಉತ್ಸವ ಮೂರ್ತಿಗಳನ್ನು ಗರುಡ ರಥ ಮತ್ತು ಮಹಾಪೂಜಾ ರಥಗಳಲ್ಲಿರಿಸಿ ಉತ್ಸವ ನಡೆಸಲಾಯಿತು. ಇದೇ ವೇಳೆ ರಥಬೀದಿ, ಮಧ್ವ ಸರೋ ವರದಲ್ಲಿ ಸಾವಿರಾರು ಹಣತೆಗಳ ದೀಪಗಳು ಕಂಗೊಳಿಸಿದವು. ವಿವಿಧ ಸ್ವಾಮೀಜಿಯವರು ಉತ್ಸವದಲ್ಲಿ ಪಾಲ್ಗೊಂಡರು. ಮಧ್ಯಾಹ್ನ ಮಳೆ ಬಂದ ಕಾರಣ ಉತ್ಸವದ ಸಂಭ್ರಮಕ್ಕೆ ತುಸು ತಡೆಯಾಯಿತು. ಇನ್ನು ಮೂರು ದಿನ ಲಕ್ಷದೀಪೋತ್ಸವ ನಡೆಯಲಿದೆ.