ಟ್ರೋಫಿ ಮೇಲೆ ಕಾಲಿಟ್ಟು ವಿವಾದ : ಮಿಚೆಲ್ ಮಾರ್ಷ್ ಹೇಳಿದ್ದೇನು..!??

ನವದೆಹಲಿ : ವಿಶ್ವಕಪ್ 2023ರ ಟ್ರೋಫಿ ಮೇಲೆ ಕಾಲಿಟ್ಟು ಭಾರೀ ವಿವಾದಕ್ಕೀಡಾದ ಬಳಿಕ ಇದೀಗ ಆಸೀಸ್ ತಂಡದ ಆಲ್ ರೌಂಡರ್ ಮಿಚೆಲ್ ಮಾರ್ಷ್ ಮೊದಲ ಬಾರಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.


ನ.19 ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್‍ಗಳಿಂದ ಭಾರತ ತಂಡವನ್ನು ಮಣಿಸಿತ್ತು. ಈ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು.

ಗೆಲುವಿನ ನಂತರ ಸಂಭ್ರಮ ಆಚರಿಸಿಕೊಂಡಿದ್ದ ಆಸೀಸ್ ಪಡೆ, ಚಿತ್ರಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡಿತ್ತು. ಚಿತ್ರವೊಂದರಲ್ಲಿ ಮಿಚೆಲ್ ಮಾರ್ಷ್ ಟ್ರೋಫಿಯ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. ಕೆಲವರು ಮಿಚೆಲ್ ಪರವಾಗಿಯೂ ವಾದಿಸಿದ್ದರು.

ಇದೀಗ ಆಸೀಸ್ ತಂಡದ ಆಟಗಾರ ಮಿಚೆಲ್ ಮಾರ್ಷ್ ತಮ್ಮ ವಿರುದ್ಧ ಕೇಳಿಬಂದ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾರಿಗೂ ಅಗೌರವ ತೋರಿಲ್ಲ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಿಲ್ಲ. ಆ ಫೋಟೋ ಸಾಕಷ್ಟು ವೈರಲ್ ಆಗಿದೆ ಎಂದು ಹಲವರು ನನ್ನ ಗಮನಕ್ಕೆ ತಂದಿದ್ದರು. ಆದರೆ ನಾನು ಅದನ್ನು ನೊಡಲು ಹೋಗಿಲ್ಲ. ಟೀಕಿಸುವಂಥದ್ದು ಅದರಲ್ಲಿ ಏನೂ ಇಲ್ಲ ಎಂದು ಮಾರ್ಷ್ ತಿಳಿಸಿದ್ದಾರೆ.

ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಲ್ಲಿ ಮಿಚೆಲ್ ಮಾರ್ಷ್ ಕೂಡ ಒಬ್ಬರಾಗಿದ್ದಾರೆ. 10 ಪಂದ್ಯಗಳಿಂದ 49ರ ಸರಾಸರಿಯಲ್ಲಿ 441 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೇ ಎರಡು ಶತಕಗಳು ಮತ್ತು ಒಂದು ಅರ್ಧಶತಕ ಗಳಿಸುವ ಮೂಲಕ 107.56 ಸ್ಟ್ರೈಕ್ ರೇಟ್ ಅನ್ನು ಮಾರ್ಷ್ ಹೊಂದಿದ್ದಾರೆ.

Scroll to Top