ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಯುವತಿಯೊಬ್ಬಳ ಹಿಂದಿನಿಂದ ಮೈ, ಕೈ ಮುಟ್ಟಿ ಬಳಿಕ ಪರಾರಿಯಾಗಲು ಯತ್ನಿಸಿದವನನ್ನು ಬಂಧಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಆರೋಪಿಯನ್ನು ಲೊಕೇಶ್ ಆಚಾರ್ ಎಂದು ಗುರುತಿಸಲಾಗಿದೆ.
22 ವರ್ಷದ ಐಟಿ ಮಹಿಳಾ ಉದ್ಯೋಗಿ ರಾಜಾಜಿನಗರದಲ್ಲಿ ನಿನ್ನೆ ಬೆಳಗ್ಗೆ 9.40ಕ್ಕೆ ಮೆಟ್ರೋ ಹತ್ತಿದ್ದಾರೆ. ಈ ವೇಳೆ ಆರೋಪಿ ಲೋಕೇಶ್ ಹಿಂಬದಿಯಲ್ಲಿ ನಿಂತು ಯುವತಿಯ ಮೈ ಕೈ ಮುಟ್ಟಿದ್ದಾನೆ. ಇದು ಗಮನಕ್ಕೆ ಬರುತ್ತಿದ್ದಂತೆಯೇ ಯುವತಿ ಜೋರಾಗಿ ಕಿರುಚಿದ್ದಾಳೆ. ಇದರಿಂದ ಗಲಿಬಿಲಿಗೊಂಡ ಲೋಕೇಶ್ ಮುಂದಿನ ನಿಲ್ದಾಣ ಬರುತ್ತಿದ್ದಂತೆಯೇ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.
ಕೂಡಲೇ ಅಲರ್ಟ್ ಆದ ಮೆಟ್ರೋ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲದೆ ಆರೋಪಿ ಲೋಕೇಶ್ನನ್ನು ಬಂಧಿಸಿದ್ದಾರೆ. ನಂತರ ಆತನನ್ನು ಉಪ್ಪಾರ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ತನಿಖೆಯ ವೇಳೆ ಆರೋಪಿ ಲೋಕೇಶ್ ಕರಾಳ ಇತಿಹಾಸ ಬಯಲಾಗಿದೆ.
ಕಿಡಿಗೇಡಿ ಲೋಕೇಶ್ ಕ್ರೈಂ ಹಿನ್ನೆಲೆ ಇರುವ ವ್ಯಕ್ತಿಯಾಗಿದ್ದು, ಈ ಹಿಂದೆಯೇ ಈತನ ಮೇಲೆ ಕೆಲ ಕೇಸ್ಗಳಿರುವುದು ಬಯಲಾಗಿದೆ. ಈ ಹಿಂದೆ ಬಿಎಂಟಿಸಿ ಬಸ್ಸಿನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ತಗ್ಲಾಕೊಂಡಿದ್ದ. ಇದಲ್ಲದೇ ಆರೋಪಿ ಬಳಿಯಿಂದ 20 ಮೊಬೈಲ್ ಫೋನ್ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿತ್ತು. ಹೀಗೆ ತನಿಖೆಯ ವೇಳೆ ಲೊಕೇಶ್ ಕಳ್ಳತನವನ್ನೇ ಕಾಯಕ ಮಾಡಿರುವ ಮ್ಯಾಟರ್ ರಿವೀಲ್ ಆಗಿದೆ.