ಅನ್ನ ಹಾಕಿದ ಮನೆಗೆ ಕನ್ನ ಹಾಕಿದ ಹೋಮ್ ನರ್ಸ್- ಆರೋಪಿ ಅರೆಸ್ಟ್..!

ಉಡುಪಿ : ವ್ಯಕ್ತಿಯೋರ್ವ ಹೋಮ್ ನರ್ಸ್ ಆಗಿ ಕೆಲಸ ಮಾಡುತಿದ್ದ ಮನೆಯಿಂದಲೇ ಹಣವನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಉಡುಪಿ ಪೊಲೀಸರು ಬಾಗಲಕೋಟೆಯಲ್ಲಿ ಬಂಧಿಸಿ ಆತನಿಂದ 3.13 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.


ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳ (34) ಬಂಧಿತ ಆರೋಪಿ.

ಈ ಕಳ್ಳತನದ ಬಗ್ಗೆ ಪುತ್ತೂರು ಗ್ರಾಮದ ಸಂತೋಷ್ ಎಂಬವರು ಉಡುಪಿ ನಗರ ಠಾಣೆಯಲ್ಲಿ ಡಿ.5ರಂದು ದೂರು ದಾಖಲಿಸಿದ್ದರು. ಮಾತಾ ಸೊಲ್ಯೂಷನ್ ಹೋಮ್ ನರ್ಸ್ ಇವರಿಂದ ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳ ಎಂಬಾತನನ್ನು ಹೋಂ ನರ್ಸ್ ಆಗಿ ಕೆಲಸಕ್ಕೆ ಇಟ್ಟುಕೊಂಡಿದ್ದು, ಪ್ರವೀಣನು ಡಿ.4ರ ಸಂಜೆ 6:30ರಿಂದ ರಾತ್ರಿ 9:00 ಗಂಟೆಯ ನಡುವೆ ನಾಪತ್ತೆಯಾಗಿದ್ದು, ಕೆಲಸ ಮಾಡುವ ಮನೆಯಿಂದಲೇ ನಾಪತ್ತೆಯಾಗಿದ್ದ. ಹೋಗುವಾಗ ಮನೆಯಿಂದ ಹಾಗೂ ಬೊಲೆರೋ ವಾಹನದ ಡ್ಯಾಶ್ ಬೋರ್ಡನಲ್ಲಿದ್ದ 3.13 ಲಕ್ಷ ರೂ. ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಲಾಗಿತ್ತು.

ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡ ಡಿ.7ರಂದು ಬಾಗಲಕೋಟೆ ತಾಲೂಕು ಹುನಗುಂದದಲ್ಲಿ ಆರೋಪಿ ಪ್ರವೀಣ್ ಕುಮಾರ್ ಜಾಲಪ್ಪ ಹರದೊಳ್ಳನನ್ನು ವಶಕ್ಕೆ ಪಡೆದು 3,13,500 ರೂ. ಹಣವನ್ನು ವಶ ಪಡಿಸಿಕೊಂಡಿದೆ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.

Baravanige News

Translate »

You cannot copy content from Baravanige News

Scroll to Top