ಬೆಳಗಾವಿಯೊಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಮಹಿಳೆಯೊಬ್ಬಳನ್ನ ಬೆತ್ತಲೆಗೊಳಿಸಿದಲ್ಲದೇ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವ ದುಷ್ಕೃತ್ಯ ಬೆಳಕಿಗೆ ಬಂದಿದೆ.
ಪೊಲೀಸರ ಎದುರೇ ಆ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಮಾಡಿರೋದು ಸಹಿಸಲಾರದ ಅಪರಾಧ ಅಂತಾನೇ ಹೇಳ್ಬಹುದು. ಅಷ್ಟಕ್ಕೂ ಇಂಥಾ ಘನಘೋರ ಘಟನೆ ಯಾಕೆ ನಡೀತು ಅಂತ ನೋಡಿದ್ರೆ ಅದಕ್ಕೆ ಆ ಊರಿನ ಪ್ರೇಮಿಗಳು ಕಾರಣ ಅನ್ನೋದು ಗೊತ್ತಾಗ್ತಿದೆ.
ಮನುಷ್ಯರಾದವ್ರು ಯಾರೂ ಇಂಥ ಕೃತ್ಯ ಮಾಡಲ್ಲ, ಮಾಡಲುಬಾರದು. ಒಂದು ವೇಳೆ ಇಂಥ ಅಮಾನವೀಯ ಘಟನೆ ನಡೆದರೂ ಇದನ್ನ ಯಾರೂ ಸಹಿಸೋಕೂ ಸಾಧ್ಯವಿಲ್ಲ. ಅದರಲ್ಲೂ ಹೆಣ್ಣನ್ನ ತಾಯಿ ಸಮಾನವಾಗಿ ಕಾಣೋ ಈ ನಾಡಲ್ಲಿ ಅದೇ ಹೆಣ್ಣನ್ನ ಬೆತ್ತಲೆಗೊಳಿಸುವುದು ಅಂದ್ರೆ ನಿಜಕ್ಕೂ ತಲೆ ತಗ್ಗಿಸುವ ಘಟನೆ ಇದು.
ಬೆತ್ತಲೆಗೊಳಿಸಿದ್ದು ಮಾತ್ರವಲ್ಲ ಆ ಮಹಿಳೆಯನ್ನ ಊರ ಜನರ ಮುಂದೆ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರೋದು ನಿಜಕ್ಕೂ ಅಪರಾಧ ಮತ್ತು ನೀಚಕೃತ್ಯ. ಇಂತಹದೊಂದು ಘಟನೆ ನಡೆದಿರೋದು ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ. ಭಾನುವಾರ ರಾತ್ರಿ ಊಟ ಮಾಡಿ ನೆಮ್ಮದಿಯಿಂದ ಮಲಗಿದ್ದ ಹೊತ್ತಲ್ಲಿ ದಿಢೀರ್ ಅಂತ ಮನೆ ನುಗ್ಗಿದ ಹತ್ತಾರು ಮಂದಿ ಏಕಾಏಕಿ 42 ವರ್ಷದ ಮಹಿಳೆ ಮೇಲೆ ಮನಸೋ ಇಚ್ಛೇ ಹಲ್ಲೆ ಮಾಡ್ತಾರೆ. ಉಟ್ಟಿದ್ದ ಸೀರೆಯನ್ನ ಎಳೆದು ಬಿಸಾಡಿದ್ದಾರೆ. ಮನುಷ್ಯತ್ವ ಮರೆತು ಬೆತ್ತಲೆಗೊಳಿಸಿದ್ದಾರೆ. ಅಷ್ಟೇ ಅಲ್ಲ, ಅಲ್ಲಿಂದ ಧರಧರನೇ ಎಳೆದು ತಂದು ರಸ್ತೆಯಲ್ಲಿದ್ದ ಕಂಬಕ್ಕೆ ಕಟ್ಟಿ ಬೇಕಾಬಿಟ್ಟಿ ಥಳಿಸಿದ್ದಾರೆ.
ಮಹಿಳೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಅಷ್ಟೋತ್ತಿಗಾಗಲೇ ಗ್ರಾಮಸ್ಥರಲ್ಲಿ ಯಾರೋ ಸ್ಥಳೀಯ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಕಾಕತಿ ಪೊಲೀಸರು ತಡರಾತ್ರಿ ಗ್ರಾಮಕ್ಕೆ ಓಡೋಡಿ ಬಂದಿದ್ದಾರೆ. ಬಂದವರೇ ಆ ಮಹಿಳೆಯನ್ನ ಕಂಬದಿಂದ ಬಿಚ್ಚಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದೇ ವೇಳೆ ಮಹಿಳೆಯ ಮೇಲೆ ಹಲ್ಲೆ ಮಾಡಿದವರಲ್ಲಿ ಕೆಲವರನ್ನ ವಶಕ್ಕೆ ಪಡೆದುಕೊಂಡು ವಾತಾವರಣ ನಿಯಂತ್ರಣಕ್ಕೆ ತಂದಿದ್ದಾರೆ. ಅಷ್ಟಕ್ಕೂ ಇಂಥಹದೊಂದು ಘಟನೆ ಯಾಕಾಯ್ತು? ಆ ಮಹಿಳೆಗೆ ಹಲ್ಲೆ ಮಾಡಿದವ್ರು ಯಾರು? ಯಾಕಾಗಿ ಹಲ್ಲೆ ಮಾಡಿದ್ರು ಅಂತ ವಿಚಾರಿಸಿದ್ರೆ ಅಲ್ಲೊಂದು ಲವ್ ಸ್ಟೋರಿ ಕಾರಣವಾಗಿದೆ ಅನ್ನೋ ವಿಚಾರ ಬಯಲಾಗಿದೆ.
ನಿಶ್ಚಿತಾರ್ಥಕ್ಕೂ ಮುನ್ನ ಓಡಿ ಹೋದ ಜೋಡಿ!
ಭಾನುವಾರ ವಂಟಮೂರಿ ಗ್ರಾಮದಲ್ಲಿ ಇಷ್ಟೊಂದು ದೊಡ್ಡ ಘಟನೆ ನಡೆಯೋದಕ್ಕೆ ಕಾರಣ ದುಂಡಪ್ಪ ಮತ್ತು ಪ್ರಿಯಾಂಕಾ ಪ್ರೀತಿ. 24 ವರ್ಷದ ದುಂಡಪ್ಪ ಹಾಗೂ 18 ವರ್ಷದ ಪ್ರಿಯಾಂಕಾ ಪರಸ್ಪರ ಪ್ರೀತಿಸ್ತಿದ್ದರು. ಇಬ್ಬರು ಒಂದೇ ಸಮುದಾಯದವ್ರು ಆಗಿದ್ದರು. ಆದ್ರೆ ಪ್ರಿಯಾಂಕಾ ಮನೆಯವರು ಬೇರೆ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಪ್ರಿಯಾಂಕಾ ಎಂಗೇಜ್ಮೆಂಟ್ ನಡೆಯಬೇಕಿತ್ತು. ಆದರೆ ರಾತ್ರಿಯೇ ದುಂಡಪ್ಪನೊಂದಿಗೆ ಪ್ರಿಯಾಂಕಾ ಊರು ಬಿಟ್ಟು ಓಡಿ ಹೋಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾಂಕಾ ಮನೆಯವರು ನೇರವಾಗಿ ದುಂಡಪ್ಪನ ಮನೆ ಬಳಿ ಬಂದು ದಾಂಧಲೆ ಮಾಡಿದ್ದಾರೆ. ಮನೆಗೆ ನುಗ್ಗಿ ಪಾತ್ರೆ ಪಗಡೆ, ಮನೆ ವಸ್ತುಗಳನ್ನೆಲ್ಲ ಹೊಡೆದು ಬಿಸಾಕಿದ್ದಾರೆ. ಮನೆಯಲ್ಲಿದ್ದ ದುಂಡಪ್ಪನ ತಾಯಿ ಮೇಲೆ ಕೋಪವನ್ನ ತೀರಿಸಿಕೊಂಡು ವಿಕೃತಿ ಮೆರೆದಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಆ ತಾಯಿಯನ್ನ ವಿವಸ್ತ್ರಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರಂತೆ.
ಕುಟುಂಬದ 7 ಜನರನ್ನ ವಶಕ್ಕೆ ಪಡೆದ ಪೊಲೀಸರು
ಅಷ್ಟೊತ್ತಿಗೆ ಪೊಲೀಸರು ಬಂದಿದ್ದಾರೆ. ಪೊಲೀಸರು ಬಂದು ಆ ಮಹಿಳೆಯನ್ನ ರಕ್ಷಿಸಿದರಂತೆ. ಇಬ್ಬರು ಪೋಲಿಸರು ಮನೆಯಲ್ಲಿನ ಸೀರೆ ತೆಗೆದುಕೊಂಡು ಹೋಗಿ ಆ ಮಹಿಳೆಯ ಕೊಟ್ಟು ಮಾನ ಮುಚ್ಚಿದರು ಎಂದು ಪ್ರತ್ಯಕ್ಷದರ್ಶಿ ಅಜ್ಜಿ ಹೇಳಿಕೊಂಡಿದ್ದಾರೆ.
ಈ ಸಂಬಂಧ ಈಗಾಗ್ಲೇ ಕುಟುಂಬದ 7 ಜನರನ್ನ ವಶಕ್ಕೆ ಪಡೆಯಲಾಗಿದೆ. ಯುವತಿ ತಂದೆ ಬಸಪ್ಪ, ದೊಡ್ಡಪ್ಪ ರಾಜು ನಾಯಕ, ತಾಯಿ, ಸಂಬಂಧಿಗಳಾದ ಪಾರ್ವತಿ, ಗಂಗವ್ವ, ಸಂಗೀತ, ಯಲ್ಲವ್ವ, ಸಹೋದರ ಕೆಂಪಣ್ಣ ವಿರುದ್ಧ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡಿದ್ದಾರೆ.