ಡಿಸೆಂಬರ್ 13 ಇಡೀ ದೇಶದ ಪಾಲಿಗೆ ಕರಾಳ ದಿನ. ಅದೇ ದಿನ 22 ವರ್ಷಗಳ ಹಿಂದೆ ಹಳೆಯ ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದಿತ್ತು. ಆದ್ರೀಗ ಹೈ-ಸೆಕ್ಯೂರಿಟಿ ನಡುವೆಯೂ ನೂತನ ಸಂಸತ್ ಭವನದೊಳಗೆ ಆಗಂತಕರು ನುಗ್ಗಿ, ದೇಶವನ್ನೇ ಬೆಚ್ಚಿಬೀಳಿಸಿದ್ದಾರೆ. ಲೋಕಸಭೆಯಲ್ಲಿ ಪ್ರಮುಖ ಭದ್ರತಾ ಲೋಪ ನಡೆದ ಪ್ರಕರಣದಲ್ಲಿ ಒಟ್ಟು ಐದು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಓರ್ವ ತಪ್ಪಿಸಿಕೊಂಡು ಹೋಗಿದ್ದಾನೆ.
ದಾಳಿಗೂ ಮುನ್ನ ಗುರುಗ್ರಾಮ್ನಲ್ಲಿ ತಂಗಿದ್ದ ಆರೋಪಿಗಳು
ಈ ಪ್ರಕರಣ ಸಂಬಂಧ ಮೊದಲು ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ದೆಹಲಿಯಲ್ಲಿ ವಿಕ್ಕಿ ಮತ್ತು ಆತನ ಪತ್ನಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಐದು ಆರೋಪಿಗಳಿಗೂ ಲಿಂಕ್ ಇದ್ದು, ದಾಳಿಗೂ ಹಿಂದಿನ ದಿನ ಅಂದ್ರೆ, ಡಿಸೆಂಬರ್ 12ರಂದು ಎಲ್ಲರೂ ಗುರುಗ್ರಾಮದ ಮನೆಯೊಂದರಲ್ಲಿ ತಂಗಿದ್ದರು ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಈ ಕೃತ್ಯವೆಸಗಲು ಸುಮಾರು 3 ತಿಂಗಳಿಂದ ತಯಾರಿ ಮಾಡಿಕೊಂಡಿದ್ದಂತೆ. ಈಗಾಗಲೇ ಆರೋಪಿಗಳು ತಂಗಿದ್ದ ಮನೆಗೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ಮೆಸೇಜಿಂಗ್ ವೇದಿಕೆಯಲ್ಲಿ ಸಂಸತ್ ಭವನದೊಳಗೆ ನುಗ್ಗುವ ಪ್ಲಾನ್ ರೆಡಿ ಮಾಡಿದ್ದರು ಅನ್ನೋದು ಬೆಳಕಿಗೆ ಬಂದಿದೆ.
ಸಂಸತ್ನ ಭದ್ರತಾ ನಿಯಮಗಳಲ್ಲಿ ಕೆಲ ಬದಲಾವಣೆ
ಸಂಸತ್ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಗೃಹ ಇಲಾಖೆ ತನಿಖೆಗೆ ಆದೇಶಿಸಿದೆ. ಸಿಆರ್ಪಿಎಫ್ ಡಿಜಿ ನೇತೃತ್ವದಲ್ಲಿ ತನಿಖಾ ನಿಯೋಗವನ್ನು ರಚಿಸಲಾಗಿದೆ. ಇನ್ನು ಸಂಸತ್ನಲ್ಲಿ ಭದ್ರತೆಯನ್ನು ಮತ್ತಷ್ಟು ಟೈಟ್ ಮಾಡಲಾಗಿದೆ. ಲೋಕಸಭೆ ಸ್ಪೀಕರ್ ಮುಂದಿನ ಆದೇಶದವರೆಗೆ ಸಂದರ್ಶಕರ ಪಾಸ್ಗಳನ್ನು ನೀಡುವುದನ್ನು ಅಮಾನತುಗೊಳಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಬಾಡಿ ಸ್ಕ್ಯಾನ್ ಯಂತ್ರಗಳನ್ನು ಸಂಸತ್ತಿನಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.
ಇಂದು ಪ್ರತಿಪಕ್ಷಗಳಿಂದ ರಾಷ್ಟ್ರಪತಿ ಭೇಟಿ
ಲೋಕಸಭೆ ಕಲಾಪದ ವೇಳೆ ಭಾರೀ ಭದ್ರತಾ ಲೋಪವಾಗಿದ್ದು, ಈ ಸಂಬಂಧ ಪ್ರತಿಪಕ್ಷಗಳ ನಾಯಕರ ನಿಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದೆ. ಬೆಳಗ್ಗೆ 10 ಗಂಟೆಗೆ ಸಂಸತ್ ಭವನದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ ನಡೆಯಲಿದ್ದು, ನಂತರ ರಾಷ್ಟ್ರಪತಿಗಳ ಭೇಟಿಯಾಗಲಿದ್ದಾರೆ ಎಂದು ಹೇಳಲಾಗ್ತಿದೆ. ಇಂದು ಸಂಸತ್ತಿನ ಉಭಯ ಸದನಗಳಲ್ಲಿ ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ವಿರೋಧ ಪಕ್ಷಗಳು ಒತ್ತಾಯಿಸಲಿವೆ.