ಉಡುಪಿ, ಡಿ 14: ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗುವ ಮಲ್ಪೆ ಬೀಚ್ ಇದೀಗ ಮತ್ತೆ ವಿವಾದದ ಮೂಲಕ ಸುದ್ದಿಯಲ್ಲಿದೆ. ಇದೀಗ ಒಂದಿಷ್ಟು ಜನ ಬೀಚ್ ಬೋಟ್ ನವರು ಪ್ರವಾಸಿಗರನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡುತ್ತಿರುವ ವಿಡಿಯೋ ಒಂದು ಸದ್ಯ ಜಿಲ್ಲೆಯಲ್ಲಿ ವೈರಲ್ ಆಗಿದ್ದು, ಮಲ್ಪೆಯಲ್ಲಿನ ಟೂರಿಸ್ಟ್ ಬೋಟ್ ನವರು ಪ್ರವಾಸಿಗರ ತಂಡಕ್ಕೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಬುಧವಾರ ಮಲ್ಪೆ ಬೀಚಿನಲ್ಲಿ ಸಾಕಷ್ಟು ಪ್ರವಾಸಿಗರ ದಂಡು ಹರಿದು ಬಂದಿತ್ತು. ಪ್ರವಾಸಿಗರೇ ತುಂಬಿರುವ ಸಂದರ್ಭದಲ್ಲಿ ಒಂದಿಷ್ಟು ಬೀಚ್ ಬೋಟ್ ಮಂದಿ, ಪ್ರವಾಸಿಗರನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡುತ್ತಿರುವ ವಿಡಿಯೋ ಒಂದು ಸದ್ಯ ವೈರಲ್ ಆಗಿದೆ.
ನಾಲ್ಕೈದು ಮಂದಿ ಒಟ್ಟು ಸೇರಿ ಪ್ರವಾಸಿಗರನ್ನ ಅಟ್ಟಾಡಿಸಿಕೊಂಡು ಯರ್ರಾಬಿರಿ ಹಲ್ಲೆ ಮಾಡುತ್ತಿರುವ ದೃಶ್ಯ ಬೀಚಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೇ ದೃಶ್ಯಾವಳಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲೂ ಕೂಡ ವೈರಲ್ ಆಗಿದೆ.
ಇದೇ ವಿಚಾರವಾಗಿ ಎರಡು ಪ್ರಕರಣಗಳು ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಒಂದು ಪ್ರವಾಸಿಗರು ಹೊಡೆದಾಡುತ್ತಿರುವ ವೇಳೆ ಸ್ಥಳೀಯರು ಜಗಳ ಬಿಡಿಸಿರುವುದಾಗಿ ಪ್ರಕರಣ ದಾಖಲಾಗಿದ್ದರೆ. ಇನ್ನೊಂದು ಪ್ರಕರಣ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿರುವುದಾಗಿ ದಾಖಲಾಗಿದೆ.
ಮಲ್ಪೆಯ ಬಾಪು ತೋಟ ನಿವಾಸಿ ಅರುಣ್ ಸುವರ್ಣ ಎನ್ನುವವರು ಟೂರಿಸ್ಟ್ ಬೋಟ್ ನವರ ವಿರುದ್ಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪ್ರವಾಸಿಗರ ಜೀವನ ಜೊತೆ ಟೂರಿಸ್ಟ್ ಬೂಟ್ ನವರು ಚೆಲ್ಲಾಟ ಆಡುತ್ತಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ.ಅರುಣ್ ಕೆ “ನಿನ್ನೆ ಸಂಜೆ 5:45 ಗಂಟೆಯಿಂದ 6 ಗಂಟೆಯ ನಡುವೆ ಎರಡು ಗುಂಪುಗಳು ಗಲಾಟೆ ಮಾಡಿಕೊಂಡಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಸಿಸಿಟಿವಿ ದೃಶ್ಯ ಗಳ ಆಧಾರದ ಮೇಲೆ ಸ್ಥಳದಲ್ಲಿದ್ದ ಹೋಂ ಗಾರ್ಡ ಅವರು ನಮಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಮಲ್ಪೆ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದೇವೆ, ಮುಂದೆ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ” ಎಂದರು.