ತಿರುವನಂತಪುರಂ: ಕೆಎಸ್ಆರ್ ಟಿಸಿ ಹೆಸರಿನ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಸಮರ ಸಾರಿದ್ದ ಕೇರಳಕ್ಕೆ ಹಿನ್ನಡೆ ಆಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಎಸ್ಆರ್ ಟಿಸಿ ಹೆಸರು ಬಳಸೋದನ್ನು ತಡೆಯಬೇಕು. ಕೆಎಸ್ಆರ್ ಟಿಸಿ ಹೆಸರು ಬಳಸಲು ತಮಗೆ ಮಾತ್ರ ಅನುಮತಿ ನೀಡಬೇಕು ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಕೆಎಸ್ಆರ್ ಟಿಸಿ ಹೆಸರು ಬಳಸಿಕೊಳ್ಳೋದಕ್ಕೆ ಯಾವುದೇ ಕಾನೂನಾತ್ಮಕ ಅಡ್ಡಿ, ನಿರ್ಬಂಧಗಳಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟಪಡಿಸಿದೆ. 2013ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಭಾರತದ ಸರ್ಕಾರದ ಟ್ರೇಡ್ಮಾರ್ಕ್ ರಿಜಿಸ್ಟ್ರಿಯಲ್ಲಿ ಕೆಎಸ್ಆರ್ ಟಿಸಿ ಹೆಸರು, ಲೋಗೋವನ್ನು ನೋಂದಾಯಿಸಿತ್ತು.
ಗಂಡಭೇರುಂಡ ಚಿನ್ಹೆಯನ್ನು ಟ್ರೇಡ್ಮಾರ್ಕ್ ಆಗಿ ಪಡೆದುಕೊಂಡಿತ್ತು. ಇದನ್ನು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿರೋಧಿಸಿತ್ತು. ಚೆನ್ನೈನಲ್ಲಿರುವ ಬೌದ್ಧಿಕಹಕ್ಕುಗಳ ಮೇಲ್ಮನವಿ ಮಂಡಳಿ ಮೆಟ್ಟಿಲೇರಿತ್ತು. ಆದ್ರೆ, ಇದು ರದ್ದಾದ ಕಾರಣ ಪ್ರಕರಣ ಮದ್ರಾಸ್ ಹೈಕೋರ್ಟ್ಗೆ ವರ್ಗವಾಗಿತ್ತು. 2019ರಲ್ಲಿ ಕೇರಳ ರಸ್ತೆ ಸಾರಿಗೆ ಸಂಸ್ಥೆ ಕೆಎಸ್ಆರ್ ಟಿಸಿ ಹೆಸರನ್ನು ನೋಂದಾಯಿಸಿತ್ತು.