ಬೆಂಗಳೂರು,ಡಿ. 28: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಯಲ್ಲಿ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಓರ್ವ ಮಹಿಳೆ ಸಾವಿಗೀಡಾಗಿ 271 ಜನ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಲ್ಯಾಬ್ ರಿಪೋರ್ಟ್ ನಲ್ಲಿ ವಿಷಪ್ರಸಾದದ ಸತ್ಯ ಬಯಲಾಗಿದೆ. ಇದಕ್ಕೆ ಕಲುಷಿತ ನೀರೇ ಪ್ರಮುಖ ಕಾರಣವಾಗಿದೆ.
ನೀರಿನಲ್ಲಿ ಕಾಲರಾ ಇರುವುದು ಕಂಡುಬಂದಿದ್ದು ಭಯವನ್ನು ಮೂಡಿಸಿದೆ. ಕಾಲರಾ ಅಂಶ ತಿಳಿಯಲು ನೀರಿನ ಮಾದರಿ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು ಎಷ್ಟು ಪ್ರಮಾಣದಲ್ಲಿ ಎಲ್ಲೆಲ್ಲಿ ಕಾಲರಾ ಹಬ್ಬಿದ ಎಂದು ಅಧಿಕಾರಿಗಳಿಂದ ತನಿಖೆ ಮಾಡಲಾಗುತ್ತಿದೆ.
ಈ ಪ್ರಸಾದ ಸ್ವೀಕರಿಸಿ ಸುಮಾರು 136 ಕ್ಕೂ ಅಧಿಕ ಜನ ಅಸ್ವಸ್ಥರಾಗಿದ್ದು ನೂರಾರು ಜನರು ಆಸ್ಪತ್ರೆಯತ್ತ ದಾವಿಸಿ ಬಂದಿದ್ದರು. ಹೀಗಾಗಿ ಒಮ್ಮೆಲೆ ನೂರಾರು ಜನ ಬಂದ ಕಾರಣ ಆಸ್ಪತ್ರೆಯಲ್ಲಿ ಬೆಡ್ ಗಳಿಲ್ಲದೆ ಹಲವರು ಜನರು ಸಂಕಷ್ಟಕ್ಕೆ ಸಿಲುಕಿದರು.
ಖಾಸಗಿ ಆಸ್ವತ್ರೆಗಳಿಗೆ ದಾಖಲಾಗಿದ್ದ ಎಲ್ಲರ ಲ್ಯಾಬ್ ರಿಪೋರ್ಟ್ನಲ್ಲಿ ಕಾಲರಾ ಅಂಶ ಪತ್ತೆ ಯಾಗಿದ್ದು ಕಾಲರಾದಿಂದ ನೂರಾರು ಜನರಿಗೆ ವಾಂತಿ ಬೇದಿ ಶುರುವಾಗಿದೆ. ನಗರದಲ್ಲಿ ಸ್ವಚ್ಚತೆಯಿಲ್ಲದ ಕಾರಣ ಕಾಲರಾ ಹರಡಿರುವ ಭೀತಿ ಎದುರಾಗಿದೆ.