ಕಾಪು ಮೀನುಗಾರಿಕಾ ಬೋಟ್ ನಲ್ಲಿ ಲಕ್ಷಾಂತರ ಮೌಲ್ಯದ ಮೀನು ದರೋಡೆ..!

ಉಡುಪಿ: ಕಾಪು ಸಮೀಪದ ಕಡಲಿನ 10 ನಾಟಿಕಲ್ ಮೈಲ್‌ ದೂರದಲ್ಲಿ ಮೀನುಗಾರಿಕಾ ಬೋಟ್ ಒಂದನ್ನು ದರೋಡೆ ಮಾಡಿದ ಪ್ರಕರಣ ವರದಿಯಾಗಿದೆ.

ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ಮೀನುಗಾರಿಕಾ ಬೋಟ್ ದರೋಡೆಯಾದ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರಿನಿಂದ ತೆರಳಿದ್ದ ಮಿರಾಶ್ -2 ಎಂಬ ಟ್ರಾಲ್‌ ಬೋಟ್‌ ದರೋಡೆಯಾಗಿರುವುದಾಗಿ ಅದರ ಮಾಲೀಕ ದೂರು ನೀಡಿದ್ದಾರೆ. ಮೀನುಗಾರಿಕೆ ಮುಗಿಸಿ ವಾಪಾಸಾಗುವ ವೇಳೆ ಕಾಪು ಲೈಟ್‌ ಹೌಸ್‌ ಬಳಿ ದರೋಡೆಕೋರರು ದಾಳಿ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳನ್ನು ದರೋಡೆ ಮಾಡಲಾಗಿದೆ.

ಪರ್ಸಿನ್ ಬೋಟ್‌ನಲ್ಲಿ ಬಂದಿದ್ದ ಏಳೆಂಟು ಜನರ ತಂಡ ಟ್ರಾಲ್ ಬೋಟ್‌ ಹತ್ತಿ ಬೋಟ್‌ನಲ್ಲಿದ್ದವರಿಗೆ ಹಲ್ಲೆ ಮಾಡಿ ಮೀನಿನ ಬಾಕ್ಸ್‌ಗಳನ್ನು ದರೋಡೆ ಮಾಡಿದೆ. ಟ್ರಾಲ್ ಬೋಟ್ ಹತ್ತಿದ್ದ ದರೋಡೆಕೋರರ ನಡುವೆ ನಡೆದ ಹೊಡೆದಾಟದಲ್ಲಿ ಆರು ಜನರಿಗೆ ಗಾಯವಾಗಿದ್ದು, 12 ಬಾಕ್ಸ್‌ ನಲ್ಲಿದ್ದ ಲಕ್ಷಾಂತರ ಮೌಲ್ಯದ ಮೀನು ಹಾಗೂ ನಾಲ್ಕು ಮೊಬೈಲ್ ಫೋನ್ ಕಿತ್ತುಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಟ್ರಾಲ್ ಬೋಟ್ ಮಾಲೀಕ ಮಹಮ್ಮದ್ ಮುಸ್ತಾಫ್ ಭಾಷಾ ದರೋಡೆ ಮಾಡಿರುವ ಬೋಟ್ ಹೆಸರು ಹಾಗೂ ದರೋಡೆ ಮಾಡಿದವರನ್ನು ಗುರುತಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Scroll to Top