ಉಡುಪಿ: ಪ್ರಸಕ್ತ ಶೈಕ್ಷಣಿಕ ಸಾಲಿನ ಅಧಿಕೃತ, ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸಲು ಸೂಚನೆ

ಉಡುಪಿ: ಪ್ರಸಕ್ತ ಶೈಕ್ಷಣಿಕ ಸಾಲಿನ ಅಧಿಕೃತ ಹಾಗೂ ಅನಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸುವ ಮೂಲಕ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವ ಪಾಲಕ, ಪೋಷಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಎಲ್ಲ ಉಪನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ನಿರ್ದೇಶನ ನೀಡಿದೆ.

ಶಿಕ್ಷಣ ಕಾಯ್ದೆಯನ್ವಯ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮತ್ತು ಮಾನ್ಯತೆ ಪಡೆದು ಶಾಲೆ ನಡೆಸಬೇಕು. ಇಲಾಖೆಯಲ್ಲಿ ನೋಂದಾಯಿಸದೆ, ಮಾನ್ಯತೆ ಪಡೆಯದೇ ಶಾಲೆ ನಡೆಯುತ್ತಿದ್ದರೆ ಅಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಪಾಲಕ, ಪೋಷಕರಿಗೂ ಮಾಹಿತಿ ನೀಡಬೇಕಾಗುತ್ತದೆ. ಹೀಗಾಗಿ ಜಿಲ್ಲಾ, ತಾಲೂಕು ಹಂತದ ಅಧಿಕೃತ, ಅನಧಿಕೃತ ಶಾಲೆಯ ಪಟ್ಟಿಯನ್ನು ಬಿಡುಗಡೆ ಮಾಡಬೇಕು ಎಂದು ಸೂಚಿಸಿದೆ.
ಅನುಮತಿ ಪಡೆದ ತರಗತಿ ಹೊರತುಪಡಿಸಿ ಹೆಚ್ಚಿನ ತರಗತಿ ನಡೆಸುತ್ತಿರುವುದು, ರಾಜ್ಯಪಠ್ಯಕ್ರಮದ ಬದಲಿಗೆ ಕೇಂದ್ರ ಪಠ್ಯಕ್ರಮದ ಬೋಧನೆ, ಕನ್ನಡ ಮಾಧ್ಯಮದ ಬದಲಿಗೆ ಆಂಗ್ಲ ಮಾಧ್ಯಮ ಬೋಧನೆ, ಹೆಚ್ಚುವರಿ ವಿಭಾಗ ಆರಂಭ, ಇಲಾಖೆಯ ಅನುಮತಿ ಇಲ್ಲದೆ ಕಟ್ಟಡ ಅಥವಾ ಶಾಲಾ ಕ್ಯಾಂಪಸ್‌ ಸ್ಥಳಾಂತರ, ಹಸ್ತಾಂತರ, ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಗೊಂಡು, ರಾಜ್ಯ ಪಠ್ಯಕ್ರಮ ನಡೆಸುತ್ತಿರುವುದು ಇತ್ಯಾದಿಗಳು ಕಂಡು ಬಂದಲ್ಲಿ ತಕ್ಷಣ ಕ್ರಮ ತೆಗೆದುಕೊಂಡು ಕಾನೂನು ಉಲ್ಲಂಘನೆಗೆ ಸೀಮಿತವಾಗಿ ಅನಧಿಕೃತ ಅಥವಾ ಅಧಿಕೃತ ಎಂದು ಪ್ರತ್ಯೇಕಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಅನಧಿಕೃತವಾಗಿ ನಡೆಯುತ್ತಿರುವ ಶಾಲೆ, ವಿಭಾಗ ಅಥವಾ ತರಗತಿ ಮುಚ್ಚಬೇಕು. ಒಂದೇ ಒಂದು ಅನಧಿಕೃತ ಶಾಲೆ ನಡೆಯಬಾರದು. ಅನಧಿಕೃತ ಶಾಲೆ ನಡೆಯುತ್ತಿರುವುದು ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

You cannot copy content from Baravanige News

Scroll to Top