ಕಾಪು: ರಸ್ತೆ ಬದಿ ಸ್ಕೂಟರ್‌ ನಿಲ್ಲಿಸಿ ಮಲಗಿದ್ದ ಸವಾರ; ಎದ್ದಾಗ ಸ್ಕೂಟರ್‌ ಸಹಿತ ಬೆಲೆ ಬಾಳುವ ಸೊತ್ತುಗಳು ನಾಪತ್ತೆ..!!

ಕಾಪು: ರಸ್ತೆ ಬದಿಯಲ್ಲಿ ಸ್ಕೂಟರ್‌ ನಿಲ್ಲಿಸಿ ಸ್ಕೂಟರ್‌ಗೆ ತಲೆ ಇಟ್ಟು ಮಲಗಿ ನಿದ್ರಿಸಿದ್ದ ಯುವಕನಿಗೆ ಗೊತ್ತಾಗದಂತೆ ಸ್ಕೂಟರ್‌ ಸಹಿತ ಬೆಲೆ ಬಾಳುವ ಸೊತ್ತುಗಳನ್ನು ಕಳ್ಳರು ಕದ್ದೊಯ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿಯಲ್ಲಿ ರವಿವಾರ ಮಧ್ಯರಾತ್ರಿ ನಡೆದಿದೆ.

ಕಾರ್ಕಳ ಮುಡಾರು ಗ್ರಾಮದ ಚೇತನ್‌ ವಂಚನೆಗೊಳಗಾಗಿದ್ದು ಅವರ ಬಳಿಯಿದ್ದ ಸ್ಕೂಟರ್‌ ಸಹಿತ ಮೊಬೈಲ್‌, ಪರ್ಸ್‌, ಪರ್ಸ್‌ನಲ್ಲಿದ್ದ ವೋಟರ್‌ ಐಡಿ, ಡಿಎಲ್‌, ಸ್ಕೂಟರ್‌ನ ದಾಖಳೆ, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಎಟಿಎಂ ಕಾರ್ಡ್‌ ಹಾಗೂ ಢಿಕ್ಕಿಯಲ್ಲಿದ್ದ ಟೂಲ್ಸ್‌ ಕಳವು ಮಾಡಿಕೊಂಡು ಹೋಗಿದ್ದಾರೆ.

ಚೇತನ್‌ ಫೆ. 11ರಂದು ಮಧ್ಯರಾತ್ರಿ 12 ಗಂಟೆಯ ವೇಳೆಗೆ ರಾ.ಹೆ. 66ರ ಮೂಲಕವಾಗಿ ಸುರತ್ಕಲ್‌ಗೆ ಹೋಗುತ್ತಿದ್ದಾಗ ಕೊಪ್ಪಲಂಗಡಿ ಬಳಿ ನಿದ್ದೆ ಬಂದು ಸ್ಕೂಟರ್‌ ಸವಾರಿ ಮಾಡಲು ಕಷ್ಟವಾಗಿದ್ದು, ಅಲ್ಲೇ ಇದ್ದ ದರ್ಗಾದ ಬದಿಯಲ್ಲಿ ಸ್ಕೂಟರನ್ನು ನಿಲ್ಲಿಸಿ ಮಲಗಿದ್ದರು. 2.30ರ ವೇಳೆಗೆ ಎಚ್ಚರವಾದಾಗ ಚೇತನ್‌ ಹೆಲ್ಮೆಟ್‌ ಸಮೇತ ರಸ್ತೆ ಬದಿ ಮಲಗಿದ್ದು ಅವರ ಸ್ಕೂಟರ್‌, ಮೊಬೈಲ್‌, ಪರ್ಸ್‌ ಕಾಣೆಯಾಗಿತ್ತು. ಕೆಎ 20 ಇಡಬ್ಲ್ಯು 3016 ನೇ ಟಿವಿಎಸ್‌ ಸ್ಕೂಟರ್‌ನ ಮೌಲ್ಯ 30,000 ರೂ. ಆಗಿದೆ.
ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Scroll to Top