ಮಂಗಳೂರು: ಅಡ್ಯಾರ್ ಬಳಿ ಐಸ್‌ಕ್ರೀಂ ಘಟಕದ ಎಳನೀರು ಸೇವಿಸಿದ ಹತ್ತಕ್ಕೂ ಹೆಚ್ಚು ಮಂದಿ ಅಸ್ವಸ್ಥ : ಆಸ್ಪತ್ರೆಗೆ ದಾಖಲು

ಮಂಗಳೂರು, ಏ.11: ಹೊರವಲಯದ ಅಡ್ಯಾರ್‌ನಲ್ಲಿರುವ ಐಸ್‌ಕ್ರೀಂ ಘಟಕವೊಂದರಲ್ಲಿ ಎಳನೀರು ಸೇವಿಸಿದ ಬಳಿಕ ಹಲವರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗುತ್ತಿದೆ.

ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಏಪ್ರಿಲ್ 8 ರಂದು ಎಳನೀರು ಖರೀದಿಸಿದ್ದರು ಮತ್ತು ಮರುದಿನ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಳನೀರು ಕುಡಿದ ಬಳಿಕ ಅವರಲ್ಲಿ ವಾಂತಿ ಮತ್ತು ಭೇದಿ ಆರಂಭವಾಗಿತ್ತು. ಐಸ್‌ಕ್ರೀಂ ಘಟಕದಲ್ಲಿ ಪ್ರತಿ ಲೀಟರ್‌ಗೆ 40 ರೂ. ಬೆಲೆಯಲ್ಲಿ ಎಳನೀರು ಮಾರಾಟ ಮಾಡಲಾಗುತ್ತದೆ. ಹೀಗಾಗಿ ಈ ಪ್ರದೇಶದ ಹಲವಾರು ಜನ ಅದನ್ನು ಖರೀದಿಸುತ್ತಾರೆ.

ಅಸ್ವಸ್ಥರು ಮೊದಲಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ. ನಂತರ ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಮೂವರು ಒಳರೋಗಿಗಳಾಗಿ ದಾಖಲಾಗಿದ್ದರೆ, 12 ಮಂದಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಹೊರರೋಗಿ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಬುಧವಾರ ವಾಟ್ಸಪ್ ಮೂಲಕ ದೂರು ಸ್ವೀಕರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹಾಗೂ ಆಹಾರ ಭದ್ರತಾ ಅಧಿಕಾರಿ ಐಸ್​ಕ್ರೀಂ ಘಟಕಕ್ಕೆ ಭೇಟಿ ನೀಡಿ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಗಾಗಿ ಕಾಯಲಾಗುತ್ತಿದೆ. ಇದರ ಬೆನ್ನಲ್ಲೇ ಇಡೀ ಕಾರ್ಖಾನೆಯನ್ನು ಬಂದ್ ಮಾಡಿ ಸ್ವಚ್ಛಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನೂ ಅಧಿಕಾರಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಜೊತೆಗೆ ಮಾಹಿತಿ ಪಡೆದರು.

ಸಾರ್ವಜನಿಕರ ಆರೋಗ್ಯದದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನ ಆತಂಕಕ್ಕೆ ಒಳಗಾಗಬಾರದು ಎಂದು ಆರೋಗ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Scroll to Top