ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ  ವಂಚನೆ : ಲಕ್ಷಾಂತರ ರೂ. ಕಳೆದುಕೊಂಡ ಮಹಿಳೆ

ಉಡುಪಿ : ಬ್ಯಾಂಕ್ ಮ್ಯಾನೇಜ‌ರ್ ಎಂದು ಪರಿಚಯಿಸಿಕೊಂಡ ಆಗಂತುಕನೋರ್ವ ಮಹಿಳೆಯೋರ್ವರಿಗೆ ಮಾತಿನಲ್ಲಿಯೇ ಮರುಳುಮಾಡಿ ಬ್ಯಾಂಕ್ ಖಾತೆಯಿಂದ ಕ್ಷಣಾರ್ಧದಲ್ಲಿ ಲಕ್ಷಾಂತರ ರೂ. ಲೂಟಿಗೈದ ಘಟನೆ ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಣಿಪಾಲ ಹುಡೋ ಕಾಲನಿಯ ತ್ರೇಸಿಯಮ್ಮ (57) ವಂಚನೆಗೊಳಗಾದವರು.

ತ್ರೇಸಿಯಮ್ಮರಿಗೆ ಮೊಬೈಲ್ ಸಂಖ್ಯೆಯೊಂದರಿಂದ ಕರೆ ಮಾಡಿದ ಆಗಂತುಕನೋರ್ವ ತಾನು ಬ್ಯಾಂಕ್ ಮ್ಯಾನೇಜ‌ರ್ ಎಂದು ಪರಿಚಯಿಸಿಕೊಂಡಿದ್ದು, ಅವರ ಖಾತೆ ನಂಬರ್, ಕಸ್ಟಮರ್ ಐಡಿ, ಆಧಾ‌ರ್ ನಂಬರ್, ಡೇಟ್ ಆಫ್ ಬರ್ತ್ ಇತ್ಯಾದಿ ವಿವರಗಳನ್ನು ಕೇಳಿದ್ದಾನೆ. ತ್ರೇಸಿಯಮ್ಮ ಮಾತು ನಂಬಿ ಎಲ್ಲಾ ವಿವರ ನೀಡಿದ್ದಾರೆ.

ಅದಾದ ಬಳಿಕ ಆತ ಮೊಬೈಲ್‌ಗೆ ಬಂದ ಓಟಿಪಿ ಸಂಖ್ಯೆ ಹಾಗೂ ಇತರೆ ಕೆಲವು ಮಾಹಿತಿಗಳನ್ನೂ ಕೇಳಿ ಪಡೆದುಕೊಂಡಿದ್ದು, ವಂಚನೆಯ ಸುಳಿವು ಸಿಗದೆ ತೇನ್ರಿಯಮ್ಮ ಅವೆಲ್ಲವನ್ನೂ ನೀಡಿದ್ದಾರೆ. ಇದಾಗಿ ಕೆಲವೇ ಕ್ಷಣಗಳಲ್ಲಿ ಅವರ ಹಾಗೂ ಅವರ ಗಂಡನ ಖಾತೆಯಿಂದ ಸುಮಾರು ಒಟ್ಟು 3,91,562 ರೂ. ನಿಗೂಢ ಖಾತೆಗೆ ವರ್ಗಾವಣೆಯಾಗಿದೆ.

ಈ ವೇಳೆ ತೇಸ್ರಿಯಮ್ಮಗೆ ವಂಚನೆಯ ಅರಿವಾಗಿದ್ದು, ಅವರು ಮಣಿಪಾಲ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Scroll to Top