ಬೆಂಗಳೂರು: ಸೀರಿಯಲ್ ದೃಶ್ಯವೊಂದರಲ್ಲಿ ಸ್ಕೂಟರ್ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೇ ಇರುವ ಕಾರಣಕ್ಕೆ ʻಸೀತಾರಾಮʼ ಸೀರಿಯಲ್ ನಟಿ ವೈಷ್ಣವಿ ಗೌಡ ಅವರಿಗೆ ಬೆಂಗಳೂರು ಪೊಲೀಸರು ದಂಡ ವಿಧಿಸಿದ್ದಾರೆ.
ಸೀರಿಯಲ್ ಚಿತ್ರೀಕರಣದ ವೇಳೆ ನಟಿ ಹೆಲ್ಮೆಟ್ ಧರಿಸದೇ ನಿಯಮ ಉಲ್ಲಂಘಿಸಿದ್ದರು. ಈ ದೃಶ್ಯವನ್ನೂ ಫೋಟೋದಲ್ಲಿ ಸೆರೆ ಹಿಡಿದಿದ್ದ ಸಾಮಾಜಿಕ ಹೋರಾಟಗಾರ ಜಯಪ್ರಕಾಶ್ ಹೆಕ್ಕೂರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಫೋಟೋವನ್ನೂ ಸಹ ದೂರಿನಲ್ಲಿ ಲಗತ್ತಿಸಿದ್ದರು.
ದೂರು ಸ್ವೀಕರಿಸಿದ ಪೊಲೀಸರು ಬೆಂಗಳೂರು ರಾಜಾಜಿನಗರ ಪೊಲೀಸರಿಗೆ ವರ್ಗಾವಣೆ ಮಾಡಿದ್ದರು. ಸಾಮಾಜಿಕ ಹೋರಾಟಗಾರ ನೀಡಿದ ದೂರಿನ ಅನ್ವಯ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ವೈಷ್ಣವಿ ಗೌಡ ಅವರಿಗೆ ರಾಜಾಜಿನಗರ ಸಂಚಾರ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.
ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯ:
ಇತ್ತೀಚೆಗೆ ಸಿನಿಮಾ, ಸೀರಿಯಲ್, ವೆಬ್ಸಿರೀಸ್ಗಳಲ್ಲಿ ನಟಿಸುವ ಕೆಲ ಕಲಾವಿದರು ಬೈಕ್ ಅಥವಾ ಸ್ಕೂಟರ್ ರೈಡ್ ಮಾಡುವಾಗ ʻತಮ್ಮ ಮುಖ ಕಾಣಲಿʼ ಎಂಬ ಉದ್ದೇಶದಿಂದ ಹೆಲ್ಮೆಟ್ ಧರಿಸಿರುವುದಿಲ್ಲ. ಇದೇ ರೀತಿ ಕಾರಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸೀಟ್ ಬೆಲ್ಟ್ ಸಹ ಧರಿಸುವುದಿಲ್ಲ. ಕೆಲವು ನಟಿಯರು ಮೇಕಪ್ ಹಾಳಾಗುತ್ತದೆ ಎಂದು ಹೆಲ್ಮೆಟ್ ಧರಿಸುವುದಿಲ್ಲ. ಈ ರೀತಿಯ ಕಂಟೆಂಟ್ಗಳನ್ನು ಸಾಕಷ್ಟು ಜನರು ವೀಕ್ಷಿಸುವುದರಿಂದ ವೀಕ್ಷಕರಿಗೆ ತಪ್ಪು ಸಂದೇಶ ರವಾನಿಸಿದಂತೆ ಆಗುತ್ತದೆ. ಅಲ್ಲದೇ ಇದು ಪ್ರಾಣಾಪಾಯಕ್ಕೂ ಕಾರಣವಾಗಬಹದು. ಆದ್ದರಿಂದ ಸಂಚಾರ ಪೊಲೀಸರು ಕಲಾವಿರದರಿಗೂ ಎಚ್ಚರಿಕೆಯ ಸಂದೇಶ ನೀಡಬೇಕು. ಇಲ್ಲವೇ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬ ಒತ್ತಾಯವೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ