ಬೆಂಗಳೂರು: ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ ಅಶ್ಲೀಲ ವೀಡಿಯೋ ಪ್ರಕರಣದ ಆರೋಪಿ, ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಎಸ್ಐಟಿ ಕೈಯಲ್ಲಿ ಲಾಕ್ ಆಗಿದ್ದಾರೆ.
ಬರೋಬ್ಬರಿ 34 ದಿನಗಳಿಂದ ವಿದೇಶದಲ್ಲಿ ಭೂಗತರಾಗಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಪ್ರಜ್ವಲ್, ತಡರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಗುರುತರ ಆರೋಪ ಹೊತ್ತು ಜರ್ಮನಿಯಲ್ಲಿ ಝಾಂಡಾ ಊರಿದ್ದ ಸಂಸದ ಪ್ರಜ್ವಲ್ ಲುಫ್ತಾನ್ಸಾ ಏರ್ಲೈನ್ಸ್ನ ವಿಮಾನದಲ್ಲಿ ತಡರಾತ್ರಿ 12.46ಕ್ಕೆ ಮ್ಯೂನಿಕ್ನಿಂದ ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ಬಂದಿಳಿದ್ರು. ಇನ್ನು ಪ್ರಜ್ವಲ್ ಇದ್ದ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ನೇರವಾಗಿ ವಿಮಾನದ ಬಳಿ ತೆರಳಿದ ಸಿಐಎಸ್ಎಫ್ ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ವಶಕ್ಕೆ ಪಡೆದು ಎಮಿಗ್ರೇಷನ್ ಬಳಿಗೆ ಕರೆತಂದರು.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಎಮಿಗ್ರೇಷನ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಸಿಐಎಸ್ಎಫ್ ಪೊಲೀಸರಿಂದ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ತಮ್ಮ ವಶಕ್ಕೆ ಪಡೆದುಕೊಂಡರು.. ಎಸ್ಐಟಿ ಎಸ್ಪಿ ಸಮನ ಡಿ ಪನ್ನೇಕರ್ ನೇತೃತ್ವದಲ್ಲಿ ಪ್ರಜ್ವಲ್ನನ್ನು ವಶಕ್ಕೆ ಪಡೆಯಲಾಯ್ತು.
ಏರ್ಪೋರ್ಟ್ನಲ್ಲಿ ಪ್ರಜ್ವಲ್ನನ್ನು ವಶಕ್ಕೆ ಪಡೆದ ಎಸ್ಐಟಿ ಅಧಿಕಾರಿಗಳು, ನೇರವಾಗಿ ಎಸ್ಐಟಿ ಕಚೇರಿಗೆ ಕರೆದುಕೊಂಡು ಬಂದ್ರು. ಬಳಿಕ ಎಸ್ಐಟಿ ಕಚೇರಿಯಲ್ಲಿ ಪ್ರಾಥಮಿಕ ತನಿಖೆಯನ್ನು ನಡೆಸಿ, ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ಅಧಿಕೃತವಾಗಿ ಬಂಧನ ಮಾಡಿದರು.