ಗಾಂಜಾ ಮಾರಾಟಕ್ಕೆ ಯತ್ನ ಆರೋಪ; ಮಣಿಪಾಲದಲ್ಲಿ ಕೇರಳದ ವಿದ್ಯಾರ್ಥಿ ಬಂಧನ

ಉಡುಪಿ : ಉಡುಪಿ ಜಿಲ್ಲೆಯ ಹೆರ್ಗಾ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕೇರಳದ ವಿದ್ಯಾರ್ಥಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಕೇರಳದ ತಿರುವನಂತಪುರ ನಿವಾಸಿ ಸಿದ್ಧಾರ್ಥ್ (22 ವ) ಬಂಧಿತ ಆರೋಪಿ. ಈತನಿಂದ 20,000 ರೂ. ಮೌಲ್ಯದ ಗಾಂಜಾ ಹಾಗೂ 45,000 ರೂ. ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಸಿದ್ಧಾರ್ಥ್‌ನನ್ನು ವಶಕ್ಕೆ ಪಡೆದು ಆತನಿಂದ ಗಾಂಜಾ ಹಾಗೂ ಮೊಬೈಲ್ ಫೋನ್ ಜಪ್ತಿ ಮಾಡಿದರು. ಈತ ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಈ ಗಾಂಜಾವನ್ನು ತನ್ನ ರೂಮಿನಲ್ಲಿ ಶೇಖರಿಸಿ ಇಟ್ಟಿರುವುದು ತನಿಖೆಯಿಂದ ತಿಳಿದು ಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ನೇತೃತ್ವದಲ್ಲಿ ಪತ್ರಾಂಕಿತ ಅಧಿಕಾರಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಶಂಕರ ಹಾಗೂ ಮಣಿಪಾಲ ಠಾಣಾ ಪಿ.ಎಸ್.ಐ ರಾಘವೇಂದ್ರ ಸಿ., ಎ.ಎಸ್.ಐ. ಗಳಾದ ವಿವೇಕಾನಂದ, ಶೈಲೇಶ್ ಕುಮಾರ್ ಹಾಗೂ ಸಿಬಂದಿ ಸುಕುಮಾರ, ಅರುಣ ಕುಮಾರ್, ಚನ್ನೇಶ್, ಮಂಜುನಾಥ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Scroll to Top