ರಾಜ್ಯಕ್ಕೇ ಖುಷಿ ಸುದ್ದಿ ಕೊಟ್ಟು ತಾನೇ ಕೆಟ್ಟ ಸುದ್ದಿಯಾದ ದಿವ್ಯಾ ವಸಂತ

ಬೆಂಗಳೂರು : ಇಂದಿರಾನಗರ ‘ಸ್ಪಾ’ ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ರೂ. ಹಣ ಸುಲಿಗೆಗೆ ಯತ್ನಿಸಿದ ಪ್ರಕರಣ ಸಂಬಂಧ ಖಾಸಗಿ ಸುದ್ದಿವಾಹಿನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸೇರಿ ಇಬ್ಬರನ್ನು ಜಿ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಯ ಸಿಇಒ ರಾಜಾನುಕುಂಟೆ ವೆಂಕಟೇಶ್‌ ಹಾಗೂ ನಿರೂಪಕಿ ದಿವ್ಯಾ ವಸಂತಾ ಸೋದರ ಸಂದೇಶ್‌ ಬಂಧಿತರಾಗಿದ್ದು, ಆರೋಪಿಗಳಿಂದ 3 ಮೊಬೈಲ್ ಜಪ್ತಿ ಮಾಡಲಾಗಿದೆ.

ಕೃತ್ಯ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿರುವ ನಿರೂಪಕಿ ದಿವ್ಯಾ, ಸಚಿನ್ ಹಾಗೂ ಆಕಾಶ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇತ್ತೀಚೆಗೆ ಇಂದಿರಾನಗರದ 100 ಅಡಿ ರಸ್ತೆ 15ನೇ ಮುಖ್ಯರಸ್ತೆಯ ‘ಟ್ರಿ ಸ್ಟ್ರಾ ಅಂಡ್ ಬ್ಯೂಟಿ’ ಪಾರ್ಲರ್ ನ ವ್ಯವಸ್ಥಾಪಕ ಶಿವಶಂಕ‌ ಅವರಿಗೆ ವೇಶ್ಯಾವಾಟಿಕೆ ನಡೆದಿದೆ ಎಂದು ಬೆದರಿಸಿ ಹಣ ಸುಲಿಗೆ ಮಾಡಲು ವೆಂಕಟೇಶ್ ತಂಡ ಯತ್ನಿಸಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಸಿಇಒ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಸುಲಿಗೆ ಕೃತ್ಯಗಳಿಗೆ ವಾಟ್ಸಪ್‌ನಲ್ಲಿ ‘ಸೈ ರಿಸರ್ಚ್ ಟೀಂ’ ಹೆಸರಿನ ಗ್ರೂಪ್ ಅನ್ನು ವೆಂಕಟೇಶ್‌ ಹಾಗೂ ದಿವ್ಯಾ ಮಾಡಿಕೊಂಡಿದ್ದರು. ಈ ಗ್ರೂಪ್‌ನಲ್ಲಿ ತಮ್ಮ ಕಾರ್ಯಸೂಚಿಗಳ ಬಗ್ಗೆ ಆರೋಪಿಗಳು ಚರ್ಚಿಸುತ್ತಿದ್ದರು ಎಂದು ಮೂಲಗಳು ಹೇಳಿವೆ.

ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದ ದಿವ್ಯಾ, ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದಳು. ಅಲ್ಲದೆ ಇನ್ಸ್ಟ್ರಾಗ್ರಾಂ ಹಾಗೂ ಫೇಸ್‌ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ರೀಲ್ಸ್‌ಗಳ ಮೂಲಕ ಆಕೆ ಖ್ಯಾತಿ ಪಡೆದಿದ್ದಳು. ಖಾಸಗಿ ಸುದ್ದಿವಾಹಿನಿಯಲ್ಲಿ ಆಕೆಗೆ 15 ಸಾವಿರ ರೂ. ಸಂಬಳ ಇದ್ದರೆ, ಮನರಂಜನಾ ವಾಹಿನಿಯಲ್ಲಿ ಹಾಸ್ಯ ಕಾರ್ಯಕ್ರಮದಲ್ಲಿ ನಟಿಸುತ್ತಿದ್ದ ಆಕೆಗೆ ವಾರಕ್ಕೆ 6 ರಿಂದ 7 ಸಾವಿರ ರೂ. ಸಂಭಾವನೆ ಸಿಗುತ್ತಿತ್ತು. ಐಷಾರಾಮಿ ಜೀವನಕ್ಕೆ ಬಿದ್ದಿದ್ದ ದಿವ್ಯಾ, ಸುಲಭವಾಗಿ ಹಣ ಸಂಪಾದಿಸಲು ಅಡ್ಡ ಮಾರ್ಗ ತುಳಿದು ಸಂಕಷ್ಟಕ್ಕೆ ತುತ್ತಾಗಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಖಾಸಗಿ ವಾಹಿನಿ ಸೇರುವ ಮುನ್ನ ಯೂಟ್ಯೂಬ್‌ನಲ್ಲಿ ತನ್ನದೇ ಚಾನಲ್ ಅನ್ನು ವೆಂಕಟೇಶ್ ಮಾಡಿಕೊಂಡಿದ್ದ. ಆ ಚಾನೆಲ್‌ಗೆ ಸಂದರ್ಶನಕ್ಕಾಗಿ ದಿವ್ಯಾಳನ್ನು ಆತ ಪರಿಚಯ ಮಾಡಿಕೊಂಡಿದ್ದ. ನಂತರ ಇಬ್ಬರ ನಡುವೆ ಆತ್ಮೀಯ ಒಡನಾಟವಿತ್ತು. ಈ ಗೆಳೆತನದಲ್ಲೇ ಇಬ್ಬರು ಸುಲಿಗೆ ಕೃತ್ಯಕ್ಕಿಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಸಾಜ್ ಪಾರ್ಲರ್ ಗಳು ಹಾಗೂ ವೈದ್ಯರು ಸೇರಿ ಹಣವಂತರಿಗೆ ಹನಿಟ್ರ್ಯಾಪ್ ರೀತಿ ಸ್ನೇಹದ ಬಲೆಗೆ ಬೀಳಿಸಿಕೊಂಡು ಸುಲಿಗೆ ಮಾಡುತ್ತಿದ್ದರು. ಇದುವರೆಗೆ ಸುಮಾರು 100ಕ್ಕೂ ಹೆಚ್ಚಿನ ಜನರಿಂದ ಈ ತಂಡ ಸುಲಿಗೆ ಮಾಡಿದೆ.

ಸಂತ್ರಸ್ತರಿಂದ 80 ಸಾವಿರ, 50 ಸಾವಿರ ಹಾಗೂ 1 ಲಕ್ಷ ರೂ.ವರೆಗೆ ಆನ್‌ಲೈನ್‌ ಮೂಲಕ ತಮ್ಮ ಖಾತೆಗಳಿಗೆ ವೆಂಕಟೇಶ್‌ ಹಾಗೂ ದಿವ್ಯಾ ಹಣ ವರ್ಗಾಯಿಸಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಕರಣ ಸಂಬಂಧ ಲಗ್ಗೆರೆಯಲ್ಲಿರುವ ದಿವ್ಯಾ ಮನೆ ಮೇಲೆ ಪೊಲೀಸರು ದಾಳಿ ನಡೆಸಿ, ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಬಂಧನ ಭೀತಿಗೊಳಗಾದ ದಿವ್ಯಾ, ಮನೆಯಲ್ಲಿದ್ದ ಕ್ಯಾಮರಾ, ಲ್ಯಾಪ್‌ಟಾಪ್ ಸೇರಿ ಕೆಲ ವಸ್ತುಗಳನ್ನು ತೆಗೆದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ವೆಂಕಟೇಶ್‌ ಹಾಗೂ ದಿವ್ಯಾ ತಂಡ ಕೆಲ ದಿನಗಳ ಹಿಂದೆ ಇಂದಿರಾನಗರದ ಶ್ರೀ ಸ್ಪಾ ಆ್ಯಂಡ್ ಬ್ಯೂಟಿ ಪಾರ್ಲರ್ ಗೆ ಈಶಾನ್ಯ ರಾಜ್ಯದ ಯುವತಿಯನ್ನು ಕೆಲಸಕ್ಕೆ ಸೇರಿಸಿತ್ತು. ಬಳಿಕ ಗ್ರಾಹಕನ ಸೋಗಿನಲ್ಲಿ ಸ್ಪಾಗೆ ದಿವ್ಯಾ ಸೋದರ ಸಂದೇಶ್ ತೆರಳಿದ್ದ. ಈ ಮೊದಲೇ ಸ್ಪಾನಲ್ಲಿ ಕೆಲಸದಲ್ಲಿದ್ದ ತನ್ನ ಗ್ಯಾಂಗ್‌ನ ಯುವತಿ ಬಳಿಯೇ ಮಸಾಜ್‌ಗೆ ಗೊತ್ತುಪಡಿಸಿದ್ದ. ಆಗ ಕೊಠಡಿಯಲ್ಲಿ ರಹಸ್ಯ ಕ್ಯಾಮರಾವಿಟ್ಟು ಸಲುಗೆಯಿಂದಿರುವ ದೃಶ್ಯಾವಳಿಗಳನ್ನು ಸಂದೇಶ್ ಚಿತ್ರೀಕರಿಸಿಕೊಂಡಿದ್ದ. ಇದಾದ ಬಳಿಕ ತನ್ನ ನ್ಯೂಸ್ ಚಾನೆಲ್‌ನ ವರದಿಗಾರ್ತಿಯನ್ನು ಆ ಸ್ಪಾಗೆ ಕಳುಹಿಸಿ ವೆಂಕಟೇಶ್ ಹಣ ಸುಲಿಗೆಗೆ ಯತ್ನಿಸಿದ್ದನು.

ನಿಮ್ಮ ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಸಂದೇಶ್ ಚಿತ್ರೀಕರಿಸಿದ್ದ ವೀಡಿಯೋವನ್ನು ಸ್ಪಾ ವ್ಯವಸ್ಥಾಪಕನಿಗೆ ತೋರಿಸಿ ವೆಂಕಟೇಶ್ ಬೆದರಿಸಿದ್ದ. ಮೊದಲು 15 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ ಆರೋಪಿಗಳು, ಕೊನೆಗೆ 8 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದರು. ಈ ಬೆದರಿಕೆ ಸಹಿಸಲಾರದೆ ಸ್ಪಾ ವ್ಯವಸ್ಥಾಪಕ ಜೆ.ಬಿ.ನಗರ ಠಾಣೆಗೆ ದೂರು ಕೊಟ್ಟಿದ್ದರು. ಅಂತೆಯೇ ತನಿಖೆಗಿಳಿದ ಪೊಲೀಸರು, ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ವೆಂಕಟೇಶ್ ತಂಡದ ಬಗ್ಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ವೆಂಕಟೇಶ್‌ ಹಾಗೂ ಸಂದೇಶ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top