ಪ್ರತಿಭಾ ಕುಳಾಯಿ ನಿಂದನೆ ಪ್ರಕರಣ – ಕಹಳೆ ನ್ಯೂಸ್ ಸಂಪಾದಕನ ವಿರುದ್ಧ FIR!

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ನಿಂದನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಹಳೆ ನ್ಯೂಸ್ ಸಂಪಾದಕನ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಕಹಳೆ ನ್ಯೂಸ್ ಎಂಬ ಸುದ್ದಿ ಸಂಸ್ಥೆಯ ಸಂಪಾದಕ ಶ್ಯಾಮ ಸುದರ್ಶನ ಭಟ್ ಪ್ರತಿಭಾ ಕುಳಾಯಿ ಪ್ರತಿಭಟಿಸುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣವೊಂದರಲ್ಲಿ ಹಂಚಿ ಅಶ್ಲೀಲವಾಗಿ ಬರೆದು, ನಿಂದಿಸಿದ್ದನು. ಒಬ್ಬ ಪತ್ರಕರ್ತನಾಗಿ ಭಟ್ ಅವರ ಇಂತಹ ನೀಚ ಮನಸ್ಥಿತಿಯ ಅನಾವರಣ ನಿಜಕ್ಕೂ ಶೋಚನೀಯ ವೆಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುವ ಮೂಲಕ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧಾಭಾಸ ವ್ಯಕ್ತವಾಗಿತ್ತು.

ಪ್ರತಿಭಾ ಕುಳಾಯಿ ನೀಡಿದ ದೂರಿನ ಅನ್ವಯ ಶ್ಯಾಂ ಸುದರ್ಶನ್ ಭಟ್ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಮಹಿಳೆಯ ವಿರುದ್ಧ ಅನುಚಿತ ವರ್ತನೆ ಮತ್ತು ಸೈಬರ್ ಕ್ರೈಮ್ ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿಭಾ ಕುಳಾಯಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಬರೆದು ಅವರ ಗೌರವಕ್ಕೆ ಧಕ್ಕೆ ತಂದ ವ್ಯಕ್ತಿಯ ಬಂಧನಕ್ಕೆ ಎರಡು ತಂಡ ರಚಿಸಲಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಈ ಹಿಂದೆ ತಿಳಿಸಿದ್ದರು.

You cannot copy content from Baravanige News

Scroll to Top