ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಕಳೆದ ಒಂದು ತಿಂಗಳಿನಿಂದ ಬೋಟಿನ ಬಿಡಿಭಾಗಗಳನ್ನು ಕಳ್ಳತನ ಮಾಡುವ ದಂಧೆ ಹುಟ್ಟಿಕೊಂಡಿದೆ. ಮೇಲೆ ಎಳೆದ ಬೋಟಿನ ಫ್ಯಾನ್, ಲಂಗರು ಹಾಕಿದ ಬೋಟಿನ ಬಿಡಿ ಭಾಗಗಳನ್ನು ಕಳ್ಳತನ ಮಾಡುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೋಟಿಗೆ ಅಳವಡಿಸಲಾದ ಫ್ಯಾನ್ ಕತ್ತರಿಸಿ ಕಳವು ಮಾಡುತ್ತಿರುವ ಘಟನೆಗಳು ನಡೆಯುತ್ತಿದೆ. ಕೆಲವರು ದೂರು ನೀಡಿದರೆ ಇನ್ನೂ ಕೆಲವರು ದೂರು ನೀಡುತ್ತಿಲ್ಲ ಎನ್ನಲಾಗಿದೆ.
ಕಳೆದ ಎರಡು ತಿಂಗಳಿನಿಂದ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಇತ್ತು. ಇದೀಗ ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡಿದ್ದರೂ ಎಲ್ಲ ಬೋಟುಗಳೂ ಮತ್ಸ್ಯಬೇಟೆಗೆ ತೆರಳಿಲ್ಲ. ಬಂದರಿನ 1ನೇ, 2ನೇ ಮತ್ತು ಬಾಪುತೋಟದ ಬಳಿ ಜೆಟ್ಟಿ ಮತ್ತು ಹೊಳೆಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯಾಂತ್ರಿಕ ಬೋಟುಗಳನ್ನು ಲಂಗರು ಹಾಕಲಾಗಿದೆ. ನಿಷೇಧದ ಅವಧಿಯಲ್ಲಿ ಇಲ್ಲಿ ರಾತ್ರಿ ವೇಳೆ ಜನರ ಸಂಖ್ಯೆಯೂ ಇಲ್ಲ. ಇಲ್ಲಿನ ಕೆಲವೊಂದು ದೀಪಗಳು ಉರಿಯದ ಕಾರಣ ಕಳ್ಳರಿಗೆ ಇದು ವರದಾನವಾಗಿದೆ. ಬಾಪುತೋಟ ಧಕ್ಕೆಯ ಬಳಿ ಕಳೆದ ಕೆಲವು ಸಮಯದಲ್ಲಿ ಇದ್ದ ದೀಪಗಳು ಉರಿಯುತ್ತಿಲ್ಲ ಎನ್ನಲಾಗಿದೆ. ಕಳ್ಳರಿಗೆ ಬೋಟಿನ ಬಿಡಿ ಭಾಗಗಳನ್ನು ಕದ್ದೊಯ್ಯಲು ಅನುಕೂಲ ಮಾಡಿಕೊಟ್ಟಂತಾಗಿದೆ. ಬಂದರಿನ ಒಳಗೆ ಯಾರಿಗೂ ಪ್ರವೇಶ ಇಲ್ಲ ಎಂದು ಹೇಳಿ ಬಂದರಿನ ಗೇಟುಗಳಿಗೆ ಬೀಗ ಹಾಕಿರುವುದು ನಿಜ. ಆದರೆ ಕಳ್ಳರು ಮಾತ್ರ ಯಾವುದೇ ಭಯವಿಲ್ಲದೆ ಬಂದರಿನ ಒಳ ಪ್ರವೇಶಿಸುತ್ತಿದ್ದಾರೆ. ಈಗಾಗಲೇ ಅದೆಷ್ಟೋ ಬೋಟುಗಳ ಬ್ಯಾಟರಿ, ಫ್ಯಾನ್ ಕಳ್ಳತನ ನಡೆದಿದೆ. ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ದಿವ್ಯ ನಿರ್ಲಕ್ಷ ವಹಿಸುತ್ತಿದೆ ಎಂದು ಮೀನುಗಾರರಾದ ದಯಾಕರ್ ವಿ. ಸುವರ್ಣ ಆರೋಪಿಸಿದ್ದಾರೆ. ಬಂದರಿನಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಮೀನುಗಾರರು ಮನವಿ ಮಾಡಿದ್ದಾರೆ.
ಸಿಸಿ ಕೆಮರಾ ಅಳವಡಿಕೆಗೆ ಆಗ್ರಹ: ಬಂದರಿನ ಆವರಣದೊಳಗೆ ಕೆಲವೇ ಕೆಲವು ಸಿಸಿ ಕೆಮಾರಗಳು ಇದ್ದು ಆದೂ ಕೂಡ ಕಾರ್ಯ ನಿರ್ವಹಿಸುತ್ತಿಲ್ಲ. ಬಂದರಿನ ಸುತ್ತಮುತ್ತ ಕೆಮರಾವನ್ನು ಅಳವಡಿಸುವಂತೆ ಮೀನುಗಾರರು ಆಗ್ರಹಿಸಿದ್ದಾರೆ. ಬಂದರಿನ 1 ಮತ್ತು 2ನೇ ಹಂತದಲ್ಲಿ ದೀಪಗಳು ಉರಿಯುವುದು ಬಿಟ್ಟರೆ ಬಾಪುತೋಟದ ಭಾಗದಲ್ಲಿ ಉರಿಯುತ್ತಿಲ್ಲ. ಆಗಾಗ ಕೈಕೊಡುವ ಕರೆಂಟಿನಿಂದಾಗಿ ಇಲ್ಲಿ ಕತ್ತಲು ಅವರಿಸುವುದರಿಂದ ಕಳ್ಳರಿಗೆ ಅನುಕೂಲವಾಗಿದೆ.
ಭದ್ರತಾ ವ್ಯವಸ್ಥೆ ಕೈಗೊಳ್ಳಿ
ಮಳೆಗಾಲದಲ್ಲಿ ಎರಡು ತಿಂಗಳು ರಜೆ ಇದ್ದಿದ್ದರಿಂದ ಜನಸಂಖ್ಯೆ ಇರುತ್ತಿರಲಿಲ್ಲ. ಇದು ಕಳ್ಳತನಕ್ಕೆ ಸುಲಭವಾಗಿದೆ. ಹೊಳೆಯ ನೀರಿನ ಅಡಿಯಲ್ಲಿ ಬಂದು ಬೋಟಿನ ಫ್ಯಾನ್, ಇನ್ನಿತರ ಬಿಡಿ ಭಾಗಗಳನ್ನು ಕದಿಯುತ್ತಿರುವುದು ಗಮನಕ್ಕೆ ಬಂದಿದೆ. ಇಲಾಖೆ ಇನ್ನಷ್ಟು ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಬೇಕಾಗಿದೆ. -ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮೀನುಗಾರರ ಸಂಘ, ಮಲ್ಪೆ.
ಭದ್ರತೆಗೆ ಮತ್ತಷ್ಟು ಹೆಚ್ಚಿನ ಕ್ರಮ
ಇಲಾಖೆಯ ವತಿಯಿಂದ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ದಿಷ್ಟ ಕಡೆಗಳಲ್ಲಿ ಹೊಸ ಸಿ. ಸಿ. ಕೆಮಾರವನ್ನು ಅಳವಡಿಸಲಾಗುತ್ತದೆ. ಸೂಕ್ತ ಭದ್ರತೆಯ ದೃಷ್ಟಿಯಿಂದ ನಿರ್ವಹಣೆಯನ್ನು ವಹಿಸಿಕೊಂಡ ಪೇ ಪಾರ್ಕಿಂಗ್ ಸಿಬಂದಿಗಳು ರಾತ್ರಿ ಗಸ್ತು ತಿರುಗುತ್ತಿದ್ದಾರೆ. ಡಿಸೇಲ್ ಬಂಕ್ ಮತ್ತು ಕೆಲವೊಂದು ಸೂಕ್ತ ಸ್ಥಳಗಳಲ್ಲಿ ಬುಕ್‌ಗಳನ್ನು ಇಟ್ಟು ಬಂದಿರುವವರ ಬಗ್ಗೆ ಸಹಿಯನ್ನು ತೆಗೆದುಕೊಳ್ಳಲಾಗುತ್ತದೆ. ಪೊಲೀಸರು ರಾತ್ರಿ ಇಲ್ಲಿ ಗಸ್ತು ತಿರುಗುತ್ತಾರೆ. ಆದರೆ ಇದನ್ನೆಲ್ಲ ಮೀರಿ ಕಳ್ಳರು ವಾಮಮಾರ್ಗದಲ್ಲಿ ಬಂದು ಕಳ್ಳತನ ಮಾಡಲು ಮುಂದಾಗುತ್ತಿರುವುದು ತಲೆನೋವಾಗಿ ಪರಿಣಮಿಸಿದೆ. ಮುಂದೆ ಇನ್ನಷ್ಟು ಭದ್ರತೆಯ ಬಗ್ಗೆ ಕ್ರಮ ವಹಿಸಿಕೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.