ಶಿರೂರು: ಗುಡ್ಡ ಕುಸಿತ ಸಂಭವಿಸಿ ಇಂದಿಗೆ ಒಂದು ತಿಂಗಳು. ಆದರೂ ಭೀಕರತೆ ನೋವು ಜನರ ಮನದಲ್ಲಿ ಮಾಸದಂತ ಗಾಯ ಮಾಡಿಬಿಟ್ಟಿದೆ. ನಾಪತ್ತೆಯಾದ ಮೂರು ಮೃತದೇಹಗಳು ಇನ್ನೂ ಕೂಡ ಪತ್ತೆಯಾಗಿಲ್ಲ. ಇದರ ನಡುವೆ ತನ್ನವರನ್ನು ಕಳೆದುಕೊಂಡ ಶ್ವಾನಗಳು ರಸ್ತೆ ಬದಿಯಲ್ಲೇ ಬೀಡು ಬಿಟ್ಟಿದ್ದು, ಕಳೆದ ಒಂದು ತಿಂಗಳಿನಿಂದ ರೋದಿಸುತ್ತಿವೆ. ಆದರೀಗ ಈ ಶ್ವಾನಗಳ ರೋದನೆ ಕಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮರುಗಿದ್ದಾರೆ. ಅದಕ್ಕೊಂದು ನೆಲೆ ಕಲ್ಪಿಸಿದ್ದಾರೆ.
ಮಾಲಕರನ್ನು ಕಳೆದುಕೊಂಡು ಮರುಗುತ್ತಿದ್ದ ಶ್ವಾನಗಳ ರೋದನೆಯನ್ನು ಕಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ರವರು ಅವುಗಳನ್ನು ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಶ್ವಾನಗಳಿಗೆ ಚಿಕಿತ್ಸೆ ಕೊಡಿಸಿ ಅವುಗಳಿಗೆ ಅಗತ್ಯವಾದ ತರಬೇತಿ ನೀಡಿ ಸರ್ಕಾರಿ ಸೇವೆಗೆ ಬಳಸಿಕೊಳ್ಳಲಿದ್ದಾರಂತೆ.
ಪೊಲೀಸ್ ಜೀಪ್ ಏರಿದ ಶ್ವಾನಗಳು
ಶಿರೂರು ಹೈವೇನಲ್ಲಿ ಹೋಟೆಲ್ ನಡೆಸುತ್ತಿದ್ದ ಲಕ್ಷಣ್ ಅವರ ಕುಟುಂಬ ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದ್ದರು. ಮಾಲಕ ಮತ್ತು ಅವರ ಮನೆಯವರು ಸಾವನ್ನಪ್ಪಿದ ಬಳಿಕ 2 ಶ್ವಾನಗಳು ಅನಾಥವಾಗಿದ್ದವು. ಅಲ್ಲೇ ರಸ್ತೆ ಬದಿಯಲ್ಲೇ ಓಡಾಡುತ್ತಿದ್ದವು. ದಾರಿ ಹೋಕರು ನೀಡಿದ ಆಹಾರ ಸೇವಿಸಿ ಅಲ್ಲೇ ಇರುತ್ತಿದ್ದವು. ಆದರೀಗ ಆ ಶ್ವಾನವನ್ನು ಪೊಲೀಸ್ ಕುಟುಂಬ ಸಾಕಲು ಮುಂದಾಗಿದ್ದಾರೆ. ಆ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಎರಡು ಶ್ವಾನಗಳ ಪೈಕಿ ಒಂದು ಶ್ವಾನದ ಕಾಲಿಗೆ ಪೆಟ್ಟಾಗಿದ್ದು, ಅದಕ್ಕೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಎರಡು ಶ್ವಾನಗಳಿಗೆ ಅಗತ್ಯವಾದ ತರಬೇತಿ ಕೊಟ್ಟು ಸರ್ಕಾರಿ ಸೇವೆಗೆ ಬಳಸಲು ಮುಂದಾಗಿದ್ದಾರೆ. ಸದ್ಯ ಶ್ವಾನಗಳು ಪೊಲೀಸ್ ಜೀಪ್ ಏರಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ರವರ ಮನೆ ಸೇರಿದೆ.