ಮಗಳಿಗೆ ಸಂಕ್ರಾಂತಿ ಬುತ್ತಿ ಕೊಡಲು ಬಂದ ಅತ್ತೆಯನ್ನೇ ಚಾಕುಯಿಂದ ಇರಿದು ಕೊಂದ ಅಳಿಯ!

ಬೆಳಗಾವಿ: ಮಗಳಿಗೆ ಸಂಕ್ರಾಂತಿ ಬುತ್ತಿ ಕೊಡಲು ಬಂದಿದ್ದ ಅತ್ತೆಯನ್ನೇ ಅಳಿಯ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದಲ್ಲಿ ಇಂದು ನಡೆದಿದೆ. ಬೆಳಗಾವಿ ಕಲ್ಯಾಣ ನಗರದ ನಿವಾಸಿ ರೇಣುಕಾ ಶ್ರೀಧರ ಪದಮುಕಿ(43) ಕೊಲೆಯಾದ ಮಹಿಳೆ. ಮಲ್ಲಪ್ರಭಾ ನಗರದ ಶುಭಂ ದತ್ತಾ ಬಿರ್ಜೆ(24) ಕೊಲೆ ಮಾಡಿದ ಆರೋಪಿ. ಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ಮಗಳು ಛಾಯಾ, ಅಳಿಯ ಶುಭಂ ಜೊತೆ ವಾಸವಾಗಿದ್ದರು. ಕಳೆದ 7 ತಿಂಗಳ ಹಿಂದೆ ಅಷ್ಟೇ ಇವರ ಮದುವೆ ಆಗಿತ್ತು.

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮಗಳಿಗೆ ಸಂಕ್ರಾಂತಿ ಊಟ ಕೊಡೊಕೆ ರೇಣುಕಾ ಪದಮುಕಿ ಬಂದಿದ್ದರು. ಈ ವೇಳೆ, ನಮ್ಮ ಮನೆಗೆ ಏಕೆ ಬರುತ್ತಿಯಾ ಎಂದು ಅಳಿಯ ಶುಭಂ ತಗಾದೆ ತೆಗೆದಿದ್ದ. ಆಗ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಅತ್ತೆಯ ತೊಡೆಯ ಭಾಗಕ್ಕೆ ಶುಭಂ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ರೇಣುಕಾ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೌಟುಂಬಿಕ ಕಲಹ ವಿಕೋಪಕ್ಕೆ ಹೋಗಿ ಕೊಲೆ ನಡೆದಿರಬಹುದು ಎಂದು‌ ಪೊಲೀಸರು ಅಂದಾಜಿಸಿದ್ದಾರೆ‌. ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಬಿಮ್ಸ್ ಶವಾಗಾರಕ್ಕೆ ಮೃತದೇಹವನ್ನು ರವಾನಿಸಲಾಗಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೊಲೆ ಸಂಬಂಧ ಶುಭಂ ಬಿರ್ಜೆ ಹಾಗೂ‌ ಅವರ ತಂದೆ-ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಛಾಯಾ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಗಳನ್ನು ಸರಿಯಾಗಿ ‌ನೋಡಿಕೊಳ್ಳುತ್ತಿಲ್ಲ ಎಂದು ರೇಣುಕಾ ಪದೇ ಪದೆ ತಕರಾರು ಮಾಡುತ್ತಿದ್ದರು. ಸಂಕ್ರಾಂತಿ ಹಬ್ಬದ ಕಾರಣ ರೇಣುಕಾ ಅವರು ಮಗಳಿಗೆ ಬುತ್ತಿ ಕೊಡಲು ಬಂದಿದ್ದರು. ಈ ವೇಳೆ ಅತ್ತೆ ಮತ್ತು ಅಳಿಯನ ನಡುವೆ ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಮನೆಯಲ್ಲಿದ್ದ ಚಾಕು ತೆಗೆದುಕೊಂಡು ರೇಣುಕಾ‌ ಅವರ ತೊಡೆಗೆ ಚುಚ್ಚಿದ್ದಾನೆ ಎಂದು ಡಿಸಿಪಿ ರೋಹಣ ಜಗದೀಶ ತಿಳಿಸಿದ್ದಾರೆ.

You cannot copy content from Baravanige News

Scroll to Top