ಉಡುಪಿ: ಅಲೆವೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯ ಮತ್ತು ಒಂಬತ್ತು ಸಿಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಕೇಂದ್ರ ಸರಕಾರದ ಶಿಕ್ಷಣ ಮತ್ತು ಕೌಶಲ ಇಲಾಖೆ ಸುಮಾರು 26 ಕೋ. ರೂ. ಅನುದಾನವನ್ನು ಮಂಜೂರು ಮಾಡಿದೆ ಎಂದು ಕೇಂದ್ರ ಕೃಷಿ ಖಾತೆಯ ಸಹಾಯಕ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕೇಂದ್ರೀಯ ವಿದ್ಯಾಲಯವು ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಮತ್ತು ಸಿಬಂದಿ ವಸತಿ ಕಟ್ಟಡಗಳ ಆವಶ್ಯಕತೆಯ ಬಗ್ಗೆ ಕೇಂದ್ರದ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರಲ್ಲಿ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿ 26 ಕೋ.ರೂ. ಅನುದಾನ ಮಂಜೂರು ಮಾಡಲಾಗಿದೆ. 1ರಿಂದ 10ನೇ ತರಗತಿಗಳಿಗೆ ತಲಾ ಎರಡು ವಿಭಾಗಗಳುಳ್ಳ ತರಗತಿ ಕೊಠಡಿಗಳು ಮತ್ತು ಒಂಬತ್ತು ಸಿಬಂದಿ ವಸತಿಗಳ ಕಟ್ಟಡದ ನಿರ್ಮಾಣಕ್ಕೆ ಟೆಂಡರ್ ಅನುಮೋದನೆಯಾಗಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ.
ಕೇಂದ್ರೀಯ ವಿದ್ಯಾಲಯದ ಹೊಸ ಕಟ್ಟಡ ಈ ಭಾಗದ ವಿದ್ಯಾರ್ಥಿಗಳಿಗೆ ಉಪಯೋಗಿಯಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೂತನ ಕಟ್ಟಡವು ಅಲೆವೂರು ಪ್ರಗತಿ ನಗರದಲ್ಲಿ ನಿರ್ಮಾಣವಾಗಲಿದೆ.