‘ಮೋದಿ ನೇತೃತ್ವದ ಬಿಜೆಪಿಗೆ ನನ್ನ ಬೆಂಬಲ’ – ಸುಮಲತಾ ಅಂಬರೀಶ್

ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿದೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಬೆಂಬಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಘೋಷಿಸಿದ್ದಾರೆ.

ಆ ಮೂಲಕ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ತಮ್ಮ ರಾಜಕೀಯ ನಡೆಯನ್ನು ಕೊನೆಗೂ ಬಹಿರಂಗಗೊಳಿಸಿದರು.

ಮಂಡ್ಯದ ಚಾಮುಂಡೇಶ್ವರಿಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಸುಮಲತಾ, ನಾನು ಮೋದಿಯವರ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದೇನೆ. ಅವರ ನೇತೃತ್ವದಲ್ಲಿ ದೇಶ ಅಭಿವೃದ್ದಿ ಹೊಂದುತ್ತಿದೆ. ಹೀಗಾಗಿ ಅವರ ನೇತೃತ್ವದ ಸರ್ಕಾರಕ್ಕೆ ನಾನು ಬೆಂಬಲಿಸುತ್ತೇನೆ ಎಂದರು.

ನನ್ನ ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ನೆರವು ನೀಡಿದೆ. ಮೋದಿ ನಾಯಕತ್ವದಿಂದ ದೇಶ ಅಭಿವೃದ್ದಿಗೊಳ್ಳಲು ಖಂಡಿತಾ ಸಾಧ್ಯವಿದೆ. ಮಂಡ್ಯದ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯನ್ನು ಬೆಂಬಲಿಸುವ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದರು.

ಇನ್ನು ಬಿಜೆಪಿ ಸೇರ್ಪಡೆಯಾಗುವ ವಿಚಾರ ಸದ್ಯಕ್ಕಿಲ್ಲ. ಅದಕ್ಕೆ ಕೆಲವೊಂದು ತಾಂತ್ರಿಕ ಅಡಚಣೆಗಳಿವೆ. ಆದರೆ ಮಂಡ್ಯದ ಅಭಿವೃದ್ದಿಗಾಗಿ ಬಿಜೆಪಿ ಬೆಂಬಲಿಸುವ ನಿರ್ಧಾರ ನನ್ನದು. ಅಂಬರೀಶ್ ಹೆಸರಿಗಾಗಲೀ, ಮಂಡ್ಯಕ್ಕಾಗಲೀ ಕಳಂಕ ತರುವ ಕೆಲಸ ನಾನು ಮಾಡಲಾರೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಇನ್ನು ಸುಮಲತಾ ಬಿಜೆಪಿ ಸೇರಿದರೆ ಸಂಸದೆ ಸ್ಥಾನದಿಂದ ಅನರ್ಹಗೊಳ್ಳಲಿರುವ ಕಾರಣದಿಂದ ಕಾನೂನು ರೀತಿಯಲ್ಲಿ ಯಾವುದೇ ತೊಡಕಾಗದಂತೆ ನಿಭಾಯಿಸುವ ಸಲುವಾಗಿ ಬಿಜೆಪಿ ಸೇರ್ಪಡೆ ಆಗದೆ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಡ್ಯದಲ್ಲಿ ಆಗಿರುವ ಕಲುಷಿತ ರಾಜಕಾರಣವನ್ನು ಸ್ವಚ್ಚಗೊಳಿಸಲು ಸ್ವಚ್ಚತಾ ಅಭಿಯಾನ ಆರಂಭವಾಗಬೇಕಿದೆ. ಬದಲಾವಣೆಗಾಗಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಿ ಎನ್ನುವ ಮೂಲಕ ಪರೋಕ್ಷವಾಗಿ ಮಂಡ್ಯದಲ್ಲಿ ಎಂದರು.

You cannot copy content from Baravanige News

Scroll to Top