ವಾಟ್ಸಾಪ್ ನಲ್ಲಿ ಪಾರ್ಟ್ ಟೈಮ್ ಜಾಬ್ ಮೆಸೇಜ್; ಹಣ ದ್ವಿಗುಣಗೊಳಿಸುವ ಆಸೆಗೆ ಬಿದ್ದು ಲಕ್ಷಾಂತರ ರೂ ಕಳಕೊಂಡ ವ್ಯಕ್ತಿ; ದೂರು ದಾಖಲು..!!

ಮಂಗಳೂರು: ವಾಟ್ಸ್ ಆ್ಯಪ್ ನಲ್ಲಿ ಬಂದ ಪಾರ್ಟ್ ಟೈಮ್ ಜಾಬ್ ನ ಮೆಸೇಜ್ ನಂಬಿ ಹಣ ದ್ವಿಗುಣಗೊಳಿಸುವ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು 15 ಲಕ್ಷ ರೂ. ಕಳೆದುಕೊಂಡ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾ.4ರಂದು ಅಪರಿಚಿತ ವ್ಯಕ್ತಿಯಿಂದ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಬಂದಿದ್ದು, ಬಳಿಕ ಅಪರಿಚಿತ ವ್ಯಕ್ತಿಯು ದೂರುದಾರರ ಬಳಿ ಟೆಲಿಗ್ರಾಂ ಆ್ಯಪ್‌ನ್ನು ಡೌನ್ಲೋಡ್ ಮಾಡಲು ಸೂಚಿಸಿದ್ದರು. ಅದರಂತೆ ದೂರುದಾರರು ಟೆಲಿಗ್ರಾಂ ಆ್ಯಪನ್ನು ಡೌನ್‌ಲೋಡ್ ಮಾಡಿಕೊಂಡಿದ್ದು, ಅದರಲ್ಲಿ ಹಣವನ್ನು ಆನ್‌ಲೈನ್ ಮೂಲಕ ದ್ವಿಗುಣ ಮಾಡಲು 3 ಟಾಸ್ಕ್ ನೀಡಲಾಗಿತ್ತು. ಮೊದಲಿಗೆ 150 ರೂ., ಬಳಿಕ 2 ಸಾವಿರ ರೂ. ಹಣವನ್ನು ಹಾಕಲು ಅಪರಿಚಿತ ವ್ಯಕ್ತಿ ತಿಳಿಸಿದ್ದ. ಹಾಗೇ ದೂರಿದಾರರಿಗೆ 2,800ರೂ. ವಾಪಸ್ ಬಂದಿತ್ತು ಎನ್ನಲಾಗಿದೆ.

ಇದನ್ನು ನಂಬಿದ ದೂರುದಾರರು ಅಪರಿಚಿತ ವ್ಯಕ್ತಿ ತಿಳಿಸಿದಂತೆ ಕಳುಹಿಸಿಕೊಟ್ಟಂತಹ ಲಿಂಕನ್ನು ಮತ್ತೊಮ್ಮೆ ಓಪನ್ ಮಾಡಿದ್ದು, ಅದರಲ್ಲಿ ದೂರುದಾರರ ಹೆಸರಿನಲ್ಲಿ ಖಾತೆ ರಚಿಸಲು ವಿವರವನ್ನು ನಮೂದಿಸುವಂತೆ ತಿಳಿಸಲಾಗಿತ್ತು. ಬಳಿಕ ಯೂಸರ್ ನೇಮ್ ಕ್ರಿಯೇಟ್ ಮಾಡಿ ಅದರ ಪಾಸ್‌ವರ್ಡ್ ನಮೂದಿಸಿದ್ದರು. ಬಳಿಕ ಅಪರಿಚಿತ ವ್ಯಕ್ತಿಯು ಆ ಖಾತೆಗೆ 2800 ರೂ. ಕಳುಹಿಸುವಂತೆ ತಿಳಿಸಿದನಲ್ಲದೆ ಯುಪಿಐ ಐಡಿ ಕಳುಹಿಸಿ 9 ಸಾವಿರ ರೂ.ನ್ನು ಕಳುಹಿಸುವ ಟಾಸ್ಕ್ ನೀಡಿದ್ದ. ಅದಕ್ಕೆ ದೂರುದಾರರು ಸ್ಪಂದಿಸಿ 9 ಸಾವಿರ ರೂ.ನ್ನು ಕಳುಹಿಸಿದ್ದರು.

ಆ ಬಳಿಕ ಅಪರಿಚಿತ ವ್ಯಕ್ತಿಯು ನಾನಾ ಬ್ಯಾಂಕ್‌ಗಳ ಖಾತೆ ನಂಬರ್ ಮತ್ತು ಐಎಫ್‌ಎಸ್‌ಸಿ ಕೋಡ್ ನೀಡಿ ಮಾ.4ರಿಂದ 8ರವರೆಗೆ ಹಂತ ಹಂತವಾಗಿ 15,34,000ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ನಗರದ ಸೆನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You cannot copy content from Baravanige News

Scroll to Top