ಮಂಗಳೂರು: ಸತ್ಯಜಿತ್, ನರೇಂದ್ರ ನಾಯಕ್ ಸೇರಿ ನಾಲ್ವರ ಅಂಗರಕ್ಷಕ ಸೇವೆ ಹಿಂಪಡೆದ ಪೊಲೀಸ್‌ ಇಲಾಖೆ

ಮಂಗಳೂರು (ಏ 01) : ಮಂಗಳೂರಿನಲ್ಲಿ ನಾಲ್ವರು ಸಾಮಾಜಿಕ ಹೋರಾಟಗಾರರಿಗೆ ನೀಡಿದ್ದ ಪೊಲೀಸ್ ಭದ್ರತಾ ಸಿಬ್ಬಂದಿ ಸೇವೆಯನ್ನು ಹಿಂಪಡೆಯಲಾಗಿದೆ.

ವಿಚಾರವಾದಿ ಮತ್ತು ಸಾಮಾಜಿಕ ಹೋರಾಟಗಾರ ನರೇಂದ್ರ ನಾಯಕ್, ಬಿಜೆಪಿ ಮಾಜಿ ನಾಯಕ ಸತ್ಯಜಿತ್ ಸುರತ್ಕಲ್, ಬಿಜೆಪಿ ಮುಖಂಡರಾದ ರಹೀಮ್‌ ಉಚ್ಚಿಲ, ಮತ್ತು ಜಗದೀಶ್ ಶೇಣವ. ಈ ನಾಲ್ವರು ಸಾಮಾಜಿಕ ಹೋರಾಟಗಾರರಿಗೆ ನೀಡಿದ್ದ ಭದ್ರತಾ ಸಿಬ್ಬಂದಿ ಸೇವೆಯನ್ನು ಹಿಂಪಡೆಯಲಾಗಿದೆ.

ನರೇಂದ್ರ ನಾಯಕ್ ವಿಚಾರವಾದಿ ಮತ್ತು ಸಾಮಾಜಿಕ ಹೋರಾಟಗಾರರಾಗಿದ್ದು, ಮೂಢನಂಬಿಕೆಗಳ ವಿರುದ್ಧ ಮಾತನಾಡುತ್ತಾರೆ. ಮತ್ತು ಹಲವು ರಹಸ್ಯಮಯ ಪವಾಡಗಳನ್ನ ಸಹ ಬಯಲಿಗೆಳೆದಿದ್ದಾರೆ. ಹಾಗಾಗಿ ಇವರಿಗೆ ಜೀವ ಬೆದರಿಕೆ ಬಂದಿತ್ತು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮಾತು ಮುಂದುವರಿಸಿದ ನರೇಂದ್ರ ನಾಯರ್ ‘ಕೆ.ಎಸ್.ಭಗವಾನ್ ಸೇರಿ ಇನ್ನೂ ಹಲವು ವಿಚಾರವಾದಿಗಳಿಗೆ ಇನ್ನೂ ಕೂಡ ಪೊಲೀಸ್ ಭದ್ರತೆಯನ್ನ ಒದಗಿಸಲಾಗಿದೆ. ಅಂಥವರು ಸೆಕ್ಯೂರಿಟಿ ಬೇಡವೆಂದರೂ ಅವರಿಗೆ ಭದ್ರತೆ ಒದಗಿಸಲಾಗುತ್ತದೆ. ಏಕೆಂದರೆ, ಅವರ ಜೀವಕ್ಕೆ ಅಪಾಯವಾದರೆ, ಅದಕ್ಕೆ ಪೊಲೀಸ್ ಇಲಾಖೆಯೇ ಹೊಣೆಯಾಗುತ್ತದೆ ಎಂಬ ಕಾರಣಕ್ಕೆ, ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ’ ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.

ಇನ್ನು ಸತ್ಯಜಿತ್ ಸುರತ್ಕಲ್ ಕಟ್ಟಾ ಹಿಂದೂ ಹೋರಾಟಗಾರರಾಗಿದ್ದು, ಕಳೆದ 16 ವರ್ಷಗಳಿಂದ ಅವರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಮಂಗಳೂರಿನಲ್ಲಿ ಸರಣಿ ಹತ್ಯೆಗಳು ನಡೆಯುವ ಮುನ್ಸೂಚನೆ ಇದ್ದ ಕಾರಣ, 2006ರಲ್ಲಿ ಸತ್ಯಜಿತ್ ಅವರಿಗೆ ಸರ್ಕಾರ ಭದ್ರತೆ ನೀಡಿತ್ತು. ಅದರಂತೆ, ಸತ್ಯಜಿತ್‌ಗೆ ಭದ್ರತೆ ನೀಡಿ ಕೆಲ ತಿಂಗಳಲ್ಲೇ, ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿಯವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

‘ನನ್ನ ಸಹಿತ ಇತರರಿಗೆ ಯಾವುದೇ ಬೆದರಿಕೆ ಇಲ್ಲ ಎಂಬುದನ್ನು ಅರಿತು ಭದ್ರತೆಯನ್ನು ಹಿಂಪಡೆಯಲಾಗಿದೆ’ ಎಂದು ರಹೀಮ್ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಮೇಲೆ ದಾಳಿ ನಡೆದ ನಂತರ, ನನಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಈ ದೇಶ ಮತ್ತು ಸಮಾಜಕ್ಕಾಗಿ ನಾನು ಕೆಲಸ ಮಾಡಿದ್ದಕ್ಕಾಗಿ ನಾನು ದಾಳಿಗೆ ಗುರಿಯಾಗಿದ್ದೆ. ನಮ್ಮ ಕಾಳಜಿಯನ್ನೂ ನಾವು ವಹಿಸಬೇಕು’ ಎಂದಿದ್ದಾರೆ. ಜಗದೀಶ್ ಶೇಣವ ಅವರ ಭದ್ರತೆಯನ್ನ ಸಹ ಹಿಂಪಡೆಯಲಾಗಿದೆ.

ವೈಯಕ್ತಿಕ ಅಂಗರಕ್ಷಕ ಸೇವೆಯನ್ನು ಹಿಂಪಡೆಯಲು ಪ್ರಮುಖವಾಗಿ ಹಣ ಪಾವತಿಯ ಭದ್ರತೆ ಸೇವೆ ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

You cannot copy content from Baravanige News

Scroll to Top