ದೇಶದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ – ಹವಾಮಾನ ಸಂಸ್ಥೆ ಸ್ಕೈಮೆಟ್ ಮನ್ಸೂಚನೆ

ನವದೆಹಲಿ : ದೇಶದಲ್ಲಿ ಕಳೆದ ನಾಲ್ಕು ವರ್ಷ ಉತ್ತಮ ಮಳೆಯಾಗಿದ್ದು, ಆದರೆ ಈ ವರ್ಷ ಮಾತ್ರ ವಾಡಿಕೆಗಿಂತ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಖಾಸಗಿ ಹವಮಾನ ಸಂಸ್ಥೆ ಸ್ಕೈಮೆಟ್ ವರದಿ ಮಾಡಿದೆ. ಆದರೆ ಈ ಬಗ್ಗೆ ಸರ್ಕಾರಿ ಹವಾಮಾನ ಇಲಾಖೆ ಯಾವುದೇ ವರದಿಯನ್ನು ಬಿಡುಗಡೆ ಮಾಡಿಲ್ಲ.


ಸತತ 4 ವರ್ಷಗಳಿಂದ ದೇಶದಲ್ಲಿ ಉತ್ತಮ ಮಳೆಯಾಗಿತ್ತು. ಈ ಬಾರಿ ಅದು ಕಡಿಮೆಯಾಗಲಿದೆ. ಬೆಳೆಗಳು ಮಾನ್ಸೂನ್ ಮಳೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ 4 ತಿಂಗಳ ಅವಧಿಯಲ್ಲಿ 868.6 ಮಿಮೀ ಸರಾಸರಿ ಮಳೆಯಾಗಲಿದೆ ಎಂದು ಸ್ಕೈಮೆಟ್ ಅಂದಾಜಿಸಿದೆ. ಹವಾಮಾನ ಸೂಚಕಗಳಾದ “ಲಾ ನಿನಾ” ಪರಿಸ್ಥಿತಿಯು ಬದಲಾಗಿ ಮತ್ತು “ಎಲ್ ನಿನೊ” ಹಿಡಿತ ಸಾಧಿಸುವ ಸಾಧ್ಯತೆಯಿಂದಾಗಿ ದೇಶದಲ್ಲಿ ಬರಗಾಲ ಉಂಟಾಗಲಿದೆ. ಶೇ.20 ರಷ್ಟು ಬರ ಬರುವ ಸಾಧ್ಯತೆಯಿದೆ. ದೇಶದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಮಳೆ ಕೊರತೆ ಹೆಚ್ಚಿರಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸೋಮವಾರ ಹೇಳಿದೆ.

ಭಾರತದ ಹವಾಮಾನ ಇಲಾಖೆ (ಐಎಂಡಿ) ಮಾನ್ಸೂನ್ ಋತುವಿನ ಮುನ್ಸೂಚನೆಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಇದು ಏಪ್ರಿಲ್ನಿಂದ ಜೂನ್ವರೆಗೆ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಶಾಖ ಇರಲಿದೆ ಎಂದು ಹೇಳಿದೆ.

You cannot copy content from Baravanige News

Scroll to Top