ಮುಂಬೈ, ಏ 25: ಮುಂಬೈನ ಗೋರೆಗಾಂವ್ ಪ್ರದೇಶದ ಓಝೋನ್ ಈಜುಕೊಳಕ್ಕೆ ಯುವಕನೊಬ್ಬ ಎತ್ತರದಿಂದ ಹಾರಿದ ಪರಿಣಾಮ 72 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ವಿಷ್ಣು ಸಮಂತ್ ಎಂದು ಗುರುತಿಸಲಾಗಿದೆ.
ಇನ್ನು ವಿಷ್ಣು ಸಮಂತ್ ಅವರು ಈಜುತ್ತಿದ್ದ ವೇಳೆ 20 ವರ್ಷದ ಯುವಕನೊಬ್ಬ ಎತ್ತರದಿಂದ ಕೊಳಕ್ಕೆ ಹಾರಿದಾಗ ವೃದ್ಧನ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂತ್ ಅವರ ಕುತ್ತಿಗೆ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಅಷ್ಟರಲ್ಲಾಗಲೇ ಸಮಂತ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಯುವಕನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 304ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.