ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕು: ಸೂಕ್ತ ದಾಖಲೆ ಇಲ್ಲದ ವಸ್ತುಗಳು ವಶಕ್ಕೆ

ಉಡುಪಿ/ಮಂಗಳೂರು: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ಪೊಲೀಸ್‌ ಹಾಗೂ ಅರೆಮಿಲಿಟರಿ ಪಡೆ ತಪಾಸಣೆ ಕಾರ್ಯವನ್ನು ಚುರುಕುಗೊಳಿಸಿದೆ. ಈಗಾಗಲೇ ಉಭಯ ಜಿಲ್ಲೆಗಳ ಚೆಕ್‌ಪೋಸ್ಟ್‌ ಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಂತರ ರೂ. ನಗದು ಹಾಗೂ ಲೀಟರ್‌ಗಟ್ಟಲೆ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

ಬ್ಯಾಂಕ್‌ನಿಂದ ಹಣ ಪಡೆದು ಬರುವ ಸಂದರ್ಭ ದಲ್ಲಿ ಅಥವಾ ಯಾವುದೇ ಉದ್ದೇಶಕ್ಕೆ ಹಣ ಕೊಂಡೊಯ್ಯುವಾಗ ಪೂರಕ ದಾಖಲೆಗಳನ್ನು ಇರಿಸಿಕೊಳ್ಳಬೇಕು. ನಿಗದಿತ ಪ್ರಮಾಣಕ್ಕಿಂತ ಅಧಿಕ ನಗದು, ಮದ್ಯವನ್ನು ಸಾಗಿಸಿದರೆ ವಶಪಡಿಸಿ ಕೊಳ್ಳಲಾಗುತ್ತದೆ ಎನ್ನುತ್ತಾರೆ ಕರ್ತವ್ಯ ನಿರತ ಪೊಲೀಸರು.

ಯಾವ ವಸ್ತುಗಳು ವಶಕ್ಕೆ

ಜಿಲ್ಲೆಯಲ್ಲಿ ಇದುವರೆಗೆ ನಗದು, ಮದ್ಯ, ಡ್ರಗ್ಸ್‌, ಇ-ಸಿಗರೇಟ್‌, ಅಕ್ಕಿ ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 25 ಪ್ರಕರಣ ದಾಖಲಿಸಲಾಗಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಧಿಕ ಪ್ರಮಾಣ ನಗದು ವಶಕ್ಕೆ ಪಡೆದಿದ್ದರೆ, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 47 ಲೀ. ಮದ್ಯ ವಶಕ್ಕೆ ಪಡೆಯಲಾಗಿದೆ.

ದಾಖಲೆ ಸಲ್ಲಿಕೆ ಹೇಗೆ?

ವಶಪಡಿಸಿಕೊಂಡ ವಸ್ತುಗಳನ್ನು ಜಿ.ಪಂ. ಸಿಇಒ ಅಧ್ಯಕ್ಷತೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಭೆಯಲ್ಲಿ ಪರಿಶೀಲಿಸಲಾಗುತ್ತದೆ. ಈ ವೇಳೆ ಸಂಬಂಧಪಟ್ಟ ವಸ್ತುಗಳ ವಾರಸುದಾರರು ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ಯಾವುದೇ ರಾಜಕೀಯ ಪಕ್ಷಗಳಿಗೆ ಸೀಮಿತವಾಗಿರಬಾರದು. ದಾಖಲೆಗಳು ಸಮರ್ಪಕವಾಗಿದ್ದರೆ ವಸ್ತುಗಳನ್ನು ಹಿಂದಿರುಗಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

You cannot copy content from Baravanige News

Scroll to Top