ಛತ್ತೀಸ್ಗಢ, ಏ.26: ನಕ್ಸಲರ ಅಟ್ಟಹಾಸ ಮತ್ತೆ ಶುರುವಾಗಿದ್ದು, ಯೋಧರನ್ನೇ ಗುರಿಯಾಗಿರಿಸಿಕೊಂಡು ಬಾಂಬ್ ಸೋಟಿಸಿ ಛತ್ತೀಸ್‍ಗಢದ ದಂತೇವಾಡದಲ್ಲಿ11 ಯೋಧರನ್ನು ಬಲಿ ತೆಗೆದುಕೊಂಡಿದ್ದಾರೆ.
ಛತ್ತೀಸ್‌ಗಢದ ನಕ್ಸಲ್ ಪ್ರಾಬಲ್ಯ ಇರುವ ದಾಂತೇವಾಡದ ಅರನ್‌ಪುರದಲ್ಲಿ ನಕ್ಸಲರು ಐಇಡಿ ನೆಲ ಬಾಂಬ್ ಸ್ಪೋಟಿಸಿ ದುಷ್ಕೃತ್ಯ ಮೆರೆದಿದ್ದು, ಡಿಆರ್‌ಜಿಯ ತಂಡವೊಂದು ವಾಹನದಲ್ಲಿ ತಮ್ಮ ಪ್ರಧಾನ ಕಛೇರಿಗೆ ಹಿಂತಿರುಗುತ್ತಿದ್ದಾಗ ವಾಹನದ ಚಾಲಕ ಸೇರಿ 11 ಯೋಧರನ್ನು ಹತ್ಯೆಗೈದಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ನಕ್ಸಲ್ ನಿಗ್ರಹ ದಳ ದೌಡಾಯಿಸಿ ನಕ್ಸಲರ ಶೋಧಕ್ಕೆ ಕಾರ್ಯಾಚರಣೆ ಕೈಗೊಂಡಿದೆ.
“ದಾಂತೇವಾಡದಲ್ಲಿ ಭದ್ರತಾ ಸಿಬಂದಿಗಳ ಮೇಲೆ ನಕ್ಸಲರು ಐಇಡಿ ದಾಳಿ ನಡೆಸಿ 11 ಸಿಬ್ಬಂದಿಯನ್ನು ಬಲಿತೆಗೆದುಕೊಂಡ ಮಾಹಿತಿ ನಮ್ಮ ಬಳಿ ಇದೆ. ಇದು ತುಂಬಾ ದುಃಖಕರವಾಗಿದೆ. ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪ. ದಾಳಿ ನಡೆಸಿದ ನಕ್ಸಲರನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಹೇಳಿಕೆ ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರೊಂದಿಗೆ ಮಾತನಾಡಿ ದಾಂತೇವಾಡ ಘಟನೆಯ ಮಾಹಿತಿ ಪಡೆದಿದ್ದು, ರಾಜ್ಯ ಸರ್ಕಾರಕ್ಕೆ ಕೇಂದ್ರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಹೇಳಿದ್ದಾರೆ.