ಬೈಂದೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಣೆ; ಬಿಜೆಪಿ ಅಭ್ಯರ್ಥಿ‌ ಸಹಿತ‌ ಹಲವರ ವಿರುದ್ಧ ಪ್ರಕರಣ ದಾಖಲು

ಕುಂದಾಪುರ, ಏ.27: ದೇವಸ್ಥಾನದಲ್ಲಿ ಮತಯಾಚಿಸುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಹಾಗೂ ಇತರರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಅಭ್ಯರ್ಥಿಯಾದ ಗುರುರಾಜ್ ಗಂಟಿಹೊಳೆ ಹಾಗೂ ಅವರ ಪದಾಧಿಕಾರಿಗಳು ಸೇರಿಕೊಂಡು ಎ.25 ರಂದು ಬೈಂದೂರು ವಿಧಾನಸಭಾ ಕ್ಷೇತ್ರದ ಸಬ್ಲಾಡಿಯ ಶ್ರೀಮಾರಿಕಾಂಬಾ ಮತ್ತು ನಂದಿಕೇಶ್ವರ ಹಾಗೂ ಸಪರಿವಾರ ದೇವಸ್ಥಾನದಲ್ಲಿ ಚುನಾವಣಾ ಪ್ರಚಾರ ಮಾಡಿದ್ದು ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಗುರುರಾಜ ಗಂಟಿಹೊಳೆ ಹಾಗೂ ಅವರ ಪದಾಧಿಕಾರಿಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸ ಬೇಕು ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಸ್. ಮಣಿಕಂಠ, ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅದರಂತೆ ಬೈಂದೂರು ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಟೀಮ್‌ನ ಅಧಿಕಾರಿ ಪ್ರಸನ್ನ ಕುಮಾರ್ ಶೇಟ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಗುರುರಾಜ ಗಂಟೆಹೊಳೆ ಹಾಗೂ ಅವರ ಪದಾಧಿಕಾರಿಗಳು ಮತ್ತು ಮಾರಿಕಾಂಬಾ ಮತ್ತು ನಂದಿಕೇಶ್ವರ ಹಾಗೂ ಸಪರಿವಾರ ದೇವಸ್ಥಾನಕ್ಕೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವಂತೆ ಇವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top